ಹೊಸ ವರ್ಷ ಸ್ವಾಗತಕ್ಕೆ ಅರಮನೆ ಆವರಣದಲ್ಲಿ ನಡೆಯಲಿದೆ ವಿಶೇಷ ಕಾರ್ಯಕ್ರಮಗಳು..!

ಮೈಸೂರು: ಹೊಸ ವರ್ಷ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು ಇಂದು ಸಂಜೆಯಿಂದಲೇ ಅರಮನೆಯಲ್ಲಿ ಸಡಗರ ಆರಂಭವಾಗಲಿದೆ.

ಇನ್ನು ನೂತನ ವರ್ಷವನ್ನು ಖುಷಿಯಿಂದ ಸ್ವಾಗತಿಸಲು ಮೈಸೂರು ಸಿಂಗಾರಗೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 12 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಲಿವೆ. 12 ಗಂಟೆಗೆ ಸರಿಯಾಗಿ ಪಟಾಕಿ, ಬಾಣಬಿರುಸುಗಳನ್ನು ಸಿಡಿಸಲು ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿದೆ.

ಅಲ್ಲದೆ ಈ ಸಂತೋಷದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿಷೇಧಿಸಲಾಗಿದೆ. ಬೆಟ್ಟಕ್ಕೆ ರಾತ್ರಿ 10ರಿಂದ ಬೆಳಗಿನ ಜಾವ 6ರವರೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗೆಯೇ ಹಿನಕಲ್ ಫ್ಲೈಓವರ್‌ನಲ್ಲೂ ಕೂಡ ಹೊಸ ವರ್ಷ ಆಚರಣೆ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಇನ್ನು ನಗರದ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಬಾರ್ ಮತ್ತು ಕ್ಲಬ್ ಗಳಲ್ಲಿ ಮಧ್ಯರಾತ್ರಿ 1ರವರೆಗೆ ಮದ್ಯ ಸರಬರಾಜು ಮಾಡಬೇಕಾದರೆ ಕಡ್ಡಾಯವಾಗಿ ಅಬಕಾರಿ ಇಲಾಖೆ ಅನುಮತಿ ಪಡೆದಿರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Scroll to Top