ಮೈಸೂರು: ಕೇರಳದಲ್ಲಿ ‘ನಿಫಾ’ ಸೋಂಕು ಮರುಕಳಿಸಿದ ಬೆನ್ನಲ್ಲೇ ಮೈಸೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಕೇರಳದ ಉತ್ತರ ಎರ್ನಾಕುಲಂನ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ನಿಫಾ ಸಾಂಕ್ರಾಮಿಕ ರೋಗ ತಗುಲಿ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ವೈದ್ಯಕೀಯ ತಪಾಸಣೆ ಕಾರ್ಯ ಆರಂಭವಾಗಿದೆ.
ಎಚ್.ಡಿ.ಕೋಟೆಯಲ್ಲಿ ಜ್ವರದ ಪ್ರಕರಣಗಳಲ್ಲಿ ನಿಫಾ ರೋಗದ ಲಕ್ಷಣಗಳು ಕಂಡು ಬಂದಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಆರಂಭಿಸಿದ್ದಾರೆ. ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ನಿಫಾ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿಫಾ ರೋಗದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ, ನೆರೆಯ ಕೇರಳದಲ್ಲಿ ಈ ರೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.
ಕೇರಳದಲ್ಲಿ ನಿಫಾ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ನಿಫಾ ರೋಗದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕುರಿತು ಪ್ರತಿದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ತಿಳಿಸಲಾಗಿದೆ.
ನಿಫಾ ರೋಗದ ಲಕ್ಷಣಗಳು:
ಜ್ವರ, ಕೆಮ್ಮು, ಉಸಿರಾಟಕ್ಕೆ ತೊಂದರೆ ಇರುತ್ತದೆ. ಕೆಲವರಿಗೆ ವಾಂತಿ ಆಗುತ್ತದೆ. ತಲೆನೋವು ಕಂಡು ಬರುತ್ತದೆ. ಕೆಲವರಿಗೆ ಮೂರ್ಛೆ ರೋಗ ಬರುವ ಸಾಧ್ಯತೆ ಇದೆ.