ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲು ಕೆಲವೇ ದಿನಗಳು ಬಾಕಿ ಇದ್ದು ಕೋವಿಡ್ ಮಹಾಮಾರಿ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಎರಡು ಹಂತದಲ್ಲಿ ಒಟ್ಟು 14 ದಿನ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶ ಹೊರಡಿಸಿದ್ದಾರೆ.
ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಇಂದಿನಿಂದ(ಅಕ್ಟೋಬರ್ 14) 18ರವರೆಗೆ ನಾಲ್ಕು ದಿನ ಸಾರ್ವಜನಿಕರಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶವಿರುವುದಿಲ್ಲ. ಹಾಗೂ ನವರಾತ್ರಿ ಸಂದರ್ಭದಲ್ಲಿ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ 23ರ ಮುಂಜಾನೆ 5 ಗಂಟೆಯಿಂದ ನವೆಂಬರ್ 1ರ ಮಧ್ಯರಾತ್ರಿ 12ರ ವರೆಗೂ ಸಹ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.
ಅ.15ರಿಂದ 17ರವರೆಗೆ ದಸರಾ ಸಿದ್ಧತೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನಗಳು ಮಾತ್ರ ಪ್ರವೇಶಿಸಬಹುದು. ಆಕ್ಟೋಬರ್ 17ರ ದಸರಾ ಉದ್ಘಾಟನೆಗೆ ಆಹ್ವಾನಿತರಿಗೆ ಮಾತ್ರ ಚಾಮುಂಡಿಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗಿದೆ.
ಇನ್ನು ಗ್ರಾಮಸ್ಥರು ಹೊರತುಪಡಿಸಿ, ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜೆಗಳು ನೆರವೇರಲಿವೆ.