ಮೈಸೂರು: ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆ ಆಗಿದೆ.
ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಇದರಿಂದ ಸುಮಾರು 170 ಕಿ. ಮೀ ರಸ್ತೆ ಮಾರ್ಗವನ್ನು 3 ಗಂಟೆಯಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಯಿತು.
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕರೋರ್ವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅವರ ದೇಹದ ವಿವಿಧ ಅಂಗಾಂಗಗಳನ್ನು ಅವರ ಮನೆಯವರು ದಾನ ಮಾಡುವ ಮೂಲಕ ಚಂದ್ರಶೇಖರ್ ಸಾವಿನಲ್ಲೂ ಸಾರ್ಥಕತೆ ಕಾಣುವಂತೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಡಿ.14ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೈಸೂರು ನಿವೇದಿತಾ ನಗರದ 27ವರ್ಷದ ಚಂದ್ರಶೇಖರ್ ಎಂಬ ಯುವಕರೋರ್ವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಚಕಿತ್ಸೆಗಾಗಿ ದಾಖಲಿಸಲಾಗಿತ್ತು. 24ಗಂಟೆಗಳ ಕಾಲ ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅಂಗಾಂಗ ದಾನ ಪ್ರಕ್ರಿಯೆಯನ್ವಯ ಅವರ ಕುಟುಂಬಿಕರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು.
ಇಂದು ಬೆಳಿಗ್ಗೆ ಅವರ ಹೃದಯವನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೂ, ಲಿವರ್ ನ್ನು ಅಪೊಲೋ ಬಿಜಿಎಸ್ ಆಸ್ಪತ್ರೆ, ಒಂದು ಕಿಡ್ನಿಯನ್ನು ಎನ್ ಯು ಆಸ್ಪತ್ರೆ ಬೆಂಗಳೂರಿಗೂ, ಮತ್ತೊಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೂ ನೀಡಲಾಗಿದೆ. ಬೆಂಗಳೂರಿಗೆ ಅಂಗಾಂಗವನ್ನು ಕೊಂಡೊಯ್ಯುವಾಗ ಝೀರೋ ಟ್ರಾಫಿಕ್ ನಲ್ಲಿ ಗ್ರೀನ್ ಕಾರಿಡಾರ್ ನಲ್ಲಿ ಕೊಂಡೊಯ್ಯಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.