ಮೈಸೂರಿನಲ್ಲಿ ಒಂದು ಯಶಸ್ವಿ ‘ಪರಿಸರ ಪ್ರಯೋಗ’: ಮೊಟ್ಟ ಮೊದಲ ಬಾರಿಗೆ ಅರಳಿ ಮರ ಸ್ಥಳಾಂತರ

ಮೈಸೂರು: ಮೈಸೂರಿನ ಅಗ್ರಹಾರದ ಖಾಸಗಿ ಜಾಗದಲ್ಲಿ ಸುಮಾರು 30 ಅಡಿ ಬೆಳದಿದ್ದ ಅರಳಿ ಮರವನ್ನು ಮೈಸೂರು ಮಹಾನಗರ ಪಾಲಿಕೆ ಸಹಾಯದೊಂದಿಗೆ ಎನ್ ಜಿಓ ಒಂದು ಯಶಸ್ವಿಯಾಗಿ ಸ್ಥಳಾಂತರ ಮಾಡಿಸಿದೆ.

ದಿಲ್ಲಿ ವಾಯುಮಾಲಿನ್ಯ ಹದಗೆಟ್ಟಿರುವುದನ್ನು ಕಂಡು ಹಲವಾರು ಮಹಾನಗರಗಳು ಮುನ್ನೆಚ್ಚರಿಕೆ ವಹಿಸುತ್ತಿವೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ವಾಯುಮಾಲಿನ್ಯದ ಕುರಿತು ಕಾಳಜಿ ವಹಿಸಿದಂತಿದೆ. ವಾಯು ಮಾಲಿನ್ಯ ತಡೆಗೆ ಹೊಸ ಐಡಿಯಾ ಮಾಡಿದೆ. ಇದೇ ಮೊಟ್ಟ ಮೊದಲ ಬಾರಿ ಅರಳಿ ಮರ ಸ್ಥಳಾಂತರ ಮಾಡುವ ಮೂಲಕ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಮೈಸೂರಿನ o2 ಎನ್.ಜಿ.ಓ ಸಂಸ್ಥೆ‌ ಅರಳೀ ಮರವನ್ನು ಬೇರು ಸಮೇತ ಸ್ಥಳಾಂತರ ಕಾರ್ಯ ಮಾಡಿಸಿದೆ.

ನಗರದ ಅಗ್ರಹಾರದ ಖಾಸಗಿಯವರಿಗೆ ಸೇರಿದ ಜಾಗದಲ್ಲಿ ಇದ್ದ ಅರಳಿ ಮರ ಸುಮಾರು 30 ಅಡಿಗೂ ಹೆಚ್ಚು ಉದ್ದ ಬೆಳೆದಿತ್ತು. ಈ ಮರವನ್ನು ಜೆಸಿಬಿ ಹಾಗೂ ಲಾರಿಗಳ ಸಹಾಯದಿಂದ ಸ್ಥಳಾಂತರ ಮಾಡಿದ್ದಾರೆ. ಬೇರೆಲ್ಲ ಮರಗಳಿಗಿಂತಲೂ ಅರಳಿ ಮರ ಹೆಚ್ಚು ಆಮ್ಲಜನಕ ನೀಡುತ್ತದೆ. ಹೀಗಾಗಿ ಮರವನ್ನು ಸ್ಥಳಾಂತರ ಮಾಡಲಾಗಿದೆ. ಈ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆಯೂ ಕೈಜೋಡಿಸಿದೆ. ಮಹಾನಗರ ಪಾಲಿಕೆ ಸದಸ್ಯ ಬಿ.ವಿ‌. ಮಂಜುನಾಥ್ ಸಮ್ಮುಖದಲ್ಲಿ ನಡೆದ ಅರಳಿ ಮರ ಸ್ಥಳಾಂತರ ಕಾರ್ಯ ಯಶಸ್ವಿಯಾಗಿದೆ.

ಮೊದಲಿಗೆ ಅರಳಿಮರವನ್ನು ಬೇರು ಸಮೇತ ಕಿತ್ತ ನಂತರ ಕ್ರೇನ್‌ ಸಹಾಯದಿಂದ ಲಾರಿಗೆ ತುಂಬಿಸಲಾಯಿತು. ಮರವನ್ನು ಕಿತ್ತ ನಂತರ ಬೇರುಗಳಿಗೆ ಗಾಸಿಯಾಗದಂತೆ ಉಪಚಾರ ಮಾಡಲಾಯಿತು. ಮತ್ತೊಂದು ಸ್ಥಳದಲ್ಲಿ ನೆಟ್ಟ ನಂತರ ಸುಲಭವಾಗಿ ಬೇರು ಬಿಟ್ಟುಕೊಳ್ಳಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಬೇರುಗಳಿಗೆ ಕಟ್ಟಲಾಯಿತು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೋಪಾನವಾಗಿ ಅರಳಿ ಮರ ನೆಡಲಾಗಿದೆ. ಅಲ್ಲಿಯೇ ಬೇರೂರಿ ಬೃಹತ್‌ ಮರವಾಗಲಿದೆ.

ಆಮ್ಲಜನಕದ ಆಗರ ಅಶ್ವತ್ಥ ವೃಕ್ಷ:

ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ ಪ್ರಭೇದ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದು. ಅರಳಿ ಮರ ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಪ್ರೋಟೀನು ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮ್ಯಾನ್ಮಾರ್‌ನ ಕೆಲ ಜಾತಿಯ ಪಕ್ಷಿಗಳು ಅರಳಿ ಮರದ ಎಲೆಗಳನ್ನು ತಿಂದೇ ಬದುಕುತ್ತವೆ.

Leave a Comment

Scroll to Top