ಮೈಸೂರು: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ಇಡೀ ರಾಜ್ಯವೇ ಲಾಕ್ ಡೌನ್ ಆಗಿದ್ದು ಜನರು ಓಡಾಡುವುದನ್ನು ನಿಯಂತ್ರಿಸಲು ಎರಡು ದಿನಗಳಿಂದೀಚೆಗೆ ತರಕಾರಿ, ದಿನಸಿಯನ್ನು ಮನೆ ಬಾಗಿಲಿಗೇ ತಂದು ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ತರಕಾರಿ, ದಿನಸಿ ಜೊತೆಗೆ ಪಡಿತರವನ್ನೂ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜ್ಯ ಸರ್ಕಾರದ ಅಡಿಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಇಂದು ಚಾಲನೆ ನೀಡಲಾಗಿದೆ. ಪಡಿತರವನ್ನು ಪಡೆಯಲು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯ ಮುಂದೆ ಗುಂಪುಗೂಡುವುದರ ಮೂಲಕ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಪಡಿತರವನ್ನು ಅವರವರ ಮನೆ ಬಾಗಿಲಿಗೆ ನ್ಯಾಯಬೆಲೆ ಅಂಗಡಿದಾರರ ಮೂಲಕ ತಲುಪಿಸುವ ಯೋಜನೆ ಇದಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ನೇತೃತ್ವದಲ್ಲಿ ಪಡಿತರ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದ್ದು, 5 ಕೆಜಿ ಅಕ್ಕಿ, ಎರಡು ಕೆಜಿ ಗೋದಿ ವಿತರಣೆ ಮಾಡಲಾಗುತ್ತಿದೆ. ಎಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರ ಒಂದೇ ಬಾರಿಗೆ ನೀಡಲಾಗುತ್ತಿದ್ದು, ಎಪಿಎಲ್-ಬಿಪಿಎಲ್ ಕಾರ್ಡ್‌ಗಳ 7 ಲಕ್ಷಕ್ಕು ಹೆಚ್ಚು ಜನರಿಗೆ ಪಡಿತರ ವಿತರಿಸಲಾಗುತ್ತಿದೆ.