ಮೈಸೂರು: ರಾಜ ಮನೆತನದ ವತಿಯಿಂದ ಸ್ಥಾಪಿಸಲಾಗಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಅನ್ನು ಈಶಾ ಫೌಂಡೇಷನ್ನ ಸಂಸ್ಥಾಪಕ ಜಗ್ಗಿ ವಾಸುದೇವ್ ಲೋಕಾರ್ಪಣೆ ಮಾಡಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಉದ್ಘಾಟನೆ ಸಾಮಾರಂಭದ ಭಾಷಣದ ವೇಳೆ ಪ್ರಮೋದಾ ದೇವಿ ಒಡೆಯಾರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ನೆನೆದು ಒಂದು ಕ್ಷಣ ಭಾವುಕರಾದರು.
ರಾಜಮನೆತನಕ್ಕೆ ಸೇರಿದ ಪಾರಂಪರಿಕ ಕಟ್ಟಡಗಳ ನವೀಕರಣ, ಸಾಮಾಜಿಕ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಸ್ಥಾಪಿಸಲಾಗಿದೆ. ಇದರಡಿಯಲ್ಲಿ ಈಗ ಜಗನ್ಮೋಹನ ಅರಮನೆ ನವೀಕರಣ, ಚಾಮರಾಜ ಆರ್ಟ್ ಗ್ಯಾಲರಿ ನವೀಕರಿಸಲಾಗಿದೆ.
ಮುಂದಿನ ದಿನಗಳಲ್ಲಿ ಗನ್ ಹೌಸ್, ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ಅರಮನೆಯ ಆವರಣದಲ್ಲಿರುವ ಆಂಜನೇಯ ದೇವಸ್ಥಾನ ಇತ್ಯಾದಿ ಪಾರಂಪರಿಕ ಕಟ್ಟಡಗಳ ನವೀಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ರಾಜವಂಶಸ್ಥರಾದ ವಿಶಾಲಾಕ್ಷಿದೇವಿ ಹಾಗೂ ಮತ್ತಿತರರು ಹಾಜರಿದ್ದರು.