ಇಂದು ಮೈಸೂರಿಗೆ ದಸರಾ ಗಜಪಡೆಯ 2ನೇ ತಂಡ ಆಗಮನ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಇಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ.

ಇನ್ನು ಒಂದು ದಿನ ಮೊದಲೆ ಬಲರಾಮ ಆನೆ ಅರಮನೆ ಪ್ರವೇಶ ಮಾಡಿದ್ದು ನಿನ್ನೆ ತಿತಿಮತಿ ಶಿಬಿರದಿಂದ ಆಗಮಿಸಿದ್ದಾನೆ. ಉಳಿದಂತೆ 2ನೇ ತಂಡದಲ್ಲಿ ವಿಕ್ರಮ, ಗೋಪಿ, ಜಯಪ್ರಕಾಶ್‌, ಕಾವೇರಿ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಲಿವೆ. ದುಬಾರೆ ಆನೆ ಶಿಬಿರದಿಂದ ಕಾವೇರಿ, ವಿಕ್ರಮ, ಗೋಪಿ, ಕೆ. ಗುಡಿ ಆನೆ ಶಿಬಿರದಿಂದ ದುರ್ಗಾಪರಮೇಶ್ವರಿ, ರಾಂಪುರ ಆನೆ ಶಿಬಿರದಿಂದ ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆ ಆಗಮಿಸಿಲಿವೆ. ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆಗಳು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಎರಡನೇ ತಂಡದ ಗಜಪಡೆ ಇಂದು ಸಂಜೆಯ ಹೊತ್ತಿಗೆ ಮೈಸೂರು ಅರಮನೆ ಪ್ರವೇಶಿಸಲಿವೆ. ಜಯಮಾರ್ತಾಂಡ ದ್ವಾರದ ಮೂಲಕ ಅರ ಮನೆ ಆವರಣಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಗುತ್ತದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಆ.22 ರಂದು ಮೊದಲ ತಂಡದಲ್ಲಿ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಮೈಸೂರು ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಿ, ಆ.26ರಂದು ಅರಮನೆ ಅಂಗಳ ಪ್ರವೇಶಿಸಿದ್ದವು.

Scroll to Top