ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಜಾನ್ ಆಚರಣೆಯ ರಂಗು: ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ಮೀನಾ ಬಜಾರ್

ಮೈಸೂರು: ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ. ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ತುಸು ಜೋರಾಗಿಯೇ ಇದೆ.

ಮುಸ್ಲಿಂಮರ ಪ್ರಮುಖ ಹಬ್ಬವಾದ ರಂಜಾನ್‌ ಹೊಸವರ್ಷದ ಪ್ರಾರಂಭ ಎನ್ನುವ ನಂಬಿಕೆ ಇದೆ. ಹೊಸ ಬಟ್ಟೆಗಳನ್ನು ಖರೀದಿಸಿ ಬಡವರಿಗೆ ದಾನ ಮಾಡುವಂತ ಆಚರಣೆ ರೂಢಿಯಲ್ಲಿದೆ. ಈ ಸಂದರ್ಭ ತಮ್ಮ ದುಡಿಮೆಯ ಶೇ.2 ರಷ್ಟು ದಾನ ಮಾಡುತ್ತಾರೆ. ಹಬ್ಬದಿಂದ ಹೆಚ್ಚು ಪ್ರಮಾಣದ ಖರೀದಿಯೂ ನಡೆಯುತ್ತದೆ.

ಹಬ್ಬದ ವಸ್ತುಗಳ ಖರೀದಿಗೆ ಪ್ರಶಸ್ತ ತಾಣ ಎನಿಸಿರುವ ಮೀನಾ ಬಜಾರ್‌ ಮತ್ತು ಸಾಡೆ ರಸ್ತೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಅಲಂಕಾರಿಕ ಸಾಮಗ್ರಿಗಳು, ಗೃಹ ಉಪಯೋಗಿ ವಸ್ತುಗಳು, ಸಿಹಿತಿನಿಸುಗಳು, ಮಕ್ಕಳ ಆಟಿಕೆಗಳು, ಸುಗಂಧ ದ್ರವ್ಯಗಳು, ಬುರ್ಖ, ಖುರ್ತಾ, ನಮಾಜ್‌ ಟೋಪಿಯಂತಹ ವಿಶೇಷ ಬಟ್ಟೆಗಳು ಮೀನಾ ಬಜಾರ್‌ನಲ್ಲಿ ದೊರೆಯುತ್ತಿವೆ. ”ವರ್ಷಪೂರ್ತಿ ನಡೆಯುವ ವ್ಯಾಪಾರ ರಂಜಾನ್‌ನ ಒಂದೇ ತಿಂಗಳಲ್ಲಿ ನಡೆಯುತ್ತದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ತರು. ಅಲ್ಲದೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರಿ ಜಿಲ್ಲೆಗಳಿಂದ ಈ ಮೀನಾ ಬಜಾರಿಗೆ ಆಗಮಿಸುತ್ತಾರಂತೆ.

ಖರ್ಜೂರ ಭರ್ಜರಿ ಮಾರಾಟ

ತಿಂಗಳು ಮುಂಚೆಯೇ ಮಾರುಕಟ್ಟೆ, ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳಿಗೆ ಬಗೆಬಗೆಯ ಖರ್ಜೂರಗಳು ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಮೈಸೂರಲ್ಲಿ ಹೆಚ್ಚಾಗಿ ಮೀನಾ ಬಜಾರ್‌, ಮಂಡಿಮೊಹಲ್ಲಾ, ದೇವರಾಜ ಅರಸು ರಸ್ತೆ ಹಾಗೂ ಸಂತೆಪೇಟೆ ಬೀದಿಗಳಲ್ಲಿ ಖರ್ಜೂರದ ಅಂಗಡಿಗಳು ಕಂಡು ಬರುತ್ತವೆ. ಪ್ರತಿವರ್ಷದಂತೆ ಈ ವರ್ಷವೂ ಖರ್ಜೂರ ವಹಿವಾಟು ನಡೆಯುತ್ತಿದೆ.

ರಂಜಾನ್‌ನ ಒಂದು ತಿಂಗಳು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಪವಾಸವಿದ್ದು ಇಫ್ತಿಯಾರ್‌ ಆಚರಿಸುವ ಮುಸಲ್ಮಾನರು ಹೆಚ್ಚು ಖರೀದಿಸುವಂತಹ ಒಣಹಣ್ಣುಗಳು, ಜಾಮೂನು, ಫಾಲೂದಾದಂಥ ಸಿಹಿತಿನಿಸುಗಳು, ಹರೀರ ಜ್ಯೂಸ್‌, ಉಪವಾಸಕ್ಕೆ ಸಹಕಾರಿಯಾಗುವ ಆಹಾರಗಳು ಮೀನಾ ಬಜಾರಿನಲ್ಲಿ ದೊರೆಯುತ್ತಿವೆ.

ಸಮೋಸ ಘಮಲು

ದಿನವಿಡೀ ಉಪವಾಸ ವ್ರತನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಸಮೋಸ, ಕಚೋರಿ, ಬಟಾಟೆ ವಡಾ, ಪಾವ್ ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಸೇರಿದಂತೆ ಹಲವು ಖಾದ್ಯಗಳ ಖರೀದಿಗೆ ಅಂಗಡಿಗಳ ಮುಂದೆ ಜನ ಸಂತೆಯಂತೆ ಸೇರಿದ ಚಿತ್ರ ಸಾಮಾನ್ಯವಾಗಿದೆ. ಬಗೆ ಬಗೆಯ ವಿಶೇಷ ಸಮೋಸಗಳು ಇಲ್ಲಿ ಲಭ್ಯವಿದ್ದು ವಿಶೇಷ ರುಚಿಯುಳ್ಳ ನಾನ್‌ವೆಜ್‌ ಸಮೋಸಗಳು ಹೆಚ್ಚು ಆಕರ್ಷಿಸುತ್ತವೆ.

ಎಲ್ಲಾ ಧರ್ಮದವರು ಬರುತ್ತಾರೆ

ಪುರುಷರಿಗೆ ಹತ್ತು ಹಲವು ಬಗೆಯ ಟೋಪಿ, ಸಲ್ವಾರ್ ಕಮೀಜ್, ಕುರ್ತಾ, ಪೈಜಾಮ ಇಲ್ಲಿ ಲಭ್ಯವಿದ್ದರೆ, ಮಹಿಳೆಯರು ಚೂಡಿದಾರ್ , ಡ್ರೆಸ್ ಮೆಟೀರಿಯಲ್, ಸಿದ್ಧ ಉಡುಪು, ವ್ಯಾನಿಟಿ ಬ್ಯಾಗ್‌, ಪಾದರಕ್ಷೆ, ಬುರ್ಖಾ, ಸೌಂದರ್ಯವರ್ಧಕ ಸಾಧನಗಳ ಖರೀದಿಗೆ ಇಲ್ಲಿಗೆ ಬರುವರು. ಕೇವಲ ಮುಸ್ಲಿಮರು ಮಾತ್ರವಲ್ಲದೆ, ಇತರ ಧರ್ಮದವರೂ ಖರೀದಿಗೆ ಇಲ್ಲಿಗೆ ಬರುತ್ತಾರೆ.

Leave a Comment

Scroll to Top