ಸುತ್ತೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ..!

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಸುತ್ತೂರಿನಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ ನಿರ್ಮಾಣವಾಗಲಿದೆ.

ಈ ಸಿಟಿ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡಲು ಸುತ್ತೂರು ಮಠ ಮುಂದೆ ಬಂದಿದ್ದು, ಈ ಜಾಗದ ಒಪ್ಪಿಗೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಐಟಿ-ಬಿಟಿ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೈನ್ಸ್ ಸಿಟಿ ಇಡೀ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ನಗರವಾಗಿ ಹೊರಹೊಮ್ಮಲಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರವನ್ನು ಮಾಡಲಾಗುತ್ತಿದೆ. ಮಂಗಳೂರು ಹಾಗೂ ದಾವಣಗೆರೆಯಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇನ್ನು 19 ಜಿಲ್ಲೆಯಲ್ಲಿ ಸೈನ್ಸ್ ಕೇಂದ್ರ ತೆರೆಯುವ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದು ಪರಮೇಶ್ವರ್ ತಿಳಿಸಿದರು.

ಈ ಸಿಟಿಯಲ್ಲಿ ಅರ್ಥ್ ಗ್ಯಾಲಕ್ಸಿ, ಸೋಲಾರ್ ಸಿಸ್ಟಮï ಸೇರಿದಂತೆ ಅನೇಕ ವಿಸ್ಮಯಗಳು ಇರಲಿವೆ. ಈ ಸಿಟಿ ನಿರ್ಮಾಣದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಮಾನವಾಗಿ ಭರಿಸಲಿದೆ. ಇದು ಕೇಂದ್ರದ ಯೋಜನೆಯಾಗಿರುವುದರಿಂದ ಸ್ಥಳದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಿಟಿ ಪೂರ್ಣಗೊಳ್ಳಲು 5 ವರ್ಷದ ಅವಧಿ ಬೇಕೆನ್ನಲಾಗಿದೆ. ಆದರೆ, 3 ವರ್ಷದೊಳಗೆ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತೆ ಎಂದು ಹೇಳಿದರು.

ಇತ್ತೀಚೆಗೆ ಪೋಷಕರಿಗೆ ತಮ್ಮ ಮಕ್ಕಳು ಡಾಕ್ಟರ್‌ ಇಲ್ಲವೇ ಎಂಜಿನಿಯರ್‌ ಆಗಬೇಕು ಎಂದೇ ಬಯಸುತ್ತಾರೆ. ಆದರೆ, ವಿಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಯೋಜನೆಯ ಮುಖ್ಯ ಉದ್ದೇಶ. ಸೈನ್ಸ್‌ ಸಿಟಿಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಅಡಗಿರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿಜ್ಞಾನದ ಮಾಹಿತಿ ದೊರಕುವುದರಿಂದ ಅವರಿಗೆ ತಮ್ಮ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಪ್ರಯೋಜನವಾಗುತ್ತದೆ” ಎಂದು ಹೇಳಿದರು.

Scroll to Top