ಮೈಸೂರು: ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ(ಸುತ್ತೂರು ಜಾತ್ರೆ ) ಮಹೋತ್ಸವವು ಇಂದಿನಿಂದ ಆರು ದಿನಗಳ ಕಾಲ ನಡೆಯಲಿದ್ದು, ಇಂದು ಅದ್ಧೂರಿ ಚಾಲನೆ ದೊರೆಯಿತು.
ಸುತ್ತೂರು ಮಠದ ಮುಖ್ಯ ವೇದಿಕೆಯಲ್ಲಿ ಆದಿಚುಂಚನಗಿರಿ ಶ್ರೀ ಕ್ಷೇತ್ರದ ನಿರ್ಮಲಾನಂದ ಶ್ರೀಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ನಂತರ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಈ ಸುತ್ತೂರು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆದುಕೊಂಡು ಬರುತ್ತಿದೆ.ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಕೂಡ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.ದೇಶದಲ್ಲಿ ಶೇ60 ರಷ್ಟು ಹಳ್ಳಿಗಳಿವೆ.ಕೃಷಿಯನ್ನು ಯಾರು ಕೈ ಬಿಡಬಾರದು. ದೇಶದ ಅಭಿವೃದ್ಧಿಗೆ ಕೃಷಿ ಸಹಾಯಕಾರಿಯಾಗಿದೆ. ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು ನಮ್ಮ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ವಸ್ತು ಪ್ರದರ್ಶನ, ಕೃಷಿ ಮೇಳ, ರಂಗೋಲಿ, ಸೋಬಾನೆ ಸ್ಪರ್ಧೆ ಉದ್ಘಾಟನೆಗೊಂಡಿತು.
6 ದಿನಗಳ ಕಾಲ ನಡೆಯುವ ಸುತ್ತೂರು ಜಾತ್ರೆ ಮಹೋತ್ಸವದಲ್ಲಿ ಫೆ. 3ರಂದು ರಥೋತ್ಸವ, 5ರಂದು ತೆಪ್ಪೋತ್ಸವ ಹಾಗೂ ಕೊಂಡೋತ್ಸವ, ಹಾಲ್ಹರವಿ ಉತ್ಸವ ಹಾಗೂ ಲಕ್ಷ ದೀಪೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು, ಸೇರಿದಂತೆ ವಿವಿಧ ಗಣ್ಯರು ಜಾತ್ರಾ ಮಹೋ ತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ, ಚಿತ್ರ ಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ದೇಸಿ ಆಟಗಳು, ಸಾರ್ವ ಜನಿಕರಿಗೆ ಗ್ರಾಮೀಣ ಆಟಗಳ ಸ್ಪರ್ಧೆ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ಕಲಾ ತಂಡ ಗಳಿಂದ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ. ಸಾಮೂಹಿಕ ವಿವಾಹವನ್ನೂ ಆಯೋಜಿಸಲಾಗುತ್ತಿದೆ.