ಮೈಸೂರಿನ ಎನ್‌ಸಿಸಿ ವಿದ್ಯಾರ್ಥಿನಿಗೆ ಸ್ವಚ್ಛ ಭಾರತ್‌ ಪ್ರಶಸ್ತಿ

ಮೈಸೂರು: ರಾಷ್ಟ್ರಪತಿಗಳ ಸ್ವಚ್ಛ ಭಾರತ್‌ ಪ್ರಶಸ್ತಿಗೆ ಮೈಸೂರು ಯುವರಾಜ ಕಾಲೇಜಿನ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಎಸ್‌.ರಂಜಿತಾ ಅವರು ಎನ್‌ಸಿಸಿ ವಿಭಾಗದಿಂದ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇವರು ವಿಜಯನಗರದ ನಿವಾಸಿ ಎನ್‌.ಕೆ.ಶಿವಾ ಹಾಗೂ ಗೀತಾ ದಂಪತಿಗಳ ಪುತ್ರಿ. ನಿನ್ನೆ ನವದೆಹಲಿಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು, ದೇಶದಲ್ಲಿಯೇ ಈ ಸಾಲಿನಲ್ಲಿ ಎನ್‌ಸಿಸಿ ವಿಭಾಗದಿಂದ ಪ್ರಶಸ್ತಿ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.

ಕರ್ನಾಟಕದಿಂದ ಮೊದಲ ಬಾರಿ ಎನ್‌ಸಿಸಿ ವಿದ್ಯಾರ್ಥಿನಿಗೆ ಈ ಪ್ರಶಸ್ತಿ ದೊರಕಿದ್ದು, ಕರ್ನಾಟಕ ನೌಕಾದಳ ಎನ್‌ಸಿಸಿ ಮೈಸೂರು ಗ್ರೂಪ್‌ನಿಂದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ವಿಭಾಗವನ್ನು ಇವರು ಪ್ರತಿನಿಧಿಸುತ್ತಿದ್ದಾರೆ.

ಎಸ್‌.ರಂಜಿತಾ ಅವರು ಮೈಸೂರಿನಲ್ಲಿ ಜೂನ್‌ 10ರಿಂದ ಜುಲೈ 31ರವರೆಗೆ ನಡೆದ ಸ್ವಚ್ಛ ಭಾರತ ಬೇಸಿಗೆ ತರಬೇತಿಯಲ್ಲಿ ಭಾಗವಹಿಸಿ ಸುಮಾರು 50 ಗಂಟೆಗಳ ಕಾಲ ಹಸಿ ಹಾಗೂ ಘನ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಈ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Leave a Comment

Scroll to Top