ನಾಳೆಯಿಂದ ದೇವಾಲಯಗಳ ಪುನರಾರಂಭ: ಚಾಮುಂಡಿಬೆಟ್ಟ, ನಂಜನಗೂಡಿನಲ್ಲಿ ಸಕಲ ಸಿದ್ಧತೆ

ಮೈಸೂರು: ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ರಾಜ್ಯದ ಎಲ್ಲಾ ದೇವಸ್ಥಾನಗಳು ಜೂನ್8 ಸೋಮವಾರದಿಂದ ಬಾಗಿಲು ತೆರೆಯಲಿವೆ. ಈಗಾಗಿ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ನಂಜನಗೂಡು ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ ನಡೆದಿದೆ.

ನಾಳೆ ದೇವಾಲಯಗಳು ಪುನರಾರಂಭ ಹಿನ್ನಲೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ಸಾಮಾಜಿಕ ಅಂತರ ಪಾಲಿಸುವಂತೆ ಮಾರ್ಕ್ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ.

ಚಾಮುಂಡಿ ಬೆಟ್ಟಕ್ಕೆ ಭೇಟಿಗೆ ಬರುವವರಿಗೆ ಜೂ.8 ರಿಂದ ಬೆಳಿಗ್ಗೆ 7.30ರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸರ್ಕಾರದ ಮಾರ್ಗಸೂಚಿಯಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವಾಲಯಕ್ಕೆ ಬರಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಮೊದಲಿಗೆ 20 ಮಂದಿ ಒಳಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ಅವರು ಹೊರಗೆ ಬಂದ ಬಳಿಕ ಮತ್ತೆ 20 ಮಂದಿಯನ್ನು ಒಳಗೆ ಬಿಡಲಾಗುತ್ತದೆ.

ದೇವಾಲಯದ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿದ್ದು, ಮಾರ್ಕ್ ಮಾಡಲಾಗಿರುವ ಬಾಕ್ಸ್ ಗಳಲ್ಲೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ನಿಯಮವನ್ನು ಪಾಲಿಸಬೇಕು. ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುವುದು. ಜೊತೆಗೆ ಸ್ಯಾನಿಟೈಸರ್ ನೀಡಲಾಗುವುದು. ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಸೇವೆಗಳಿರುವುದಿಲ್ಲ. ಜೊತೆಗೆ ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರುವಂತಿಲ್ಲ.

ಉಸಿರಾಟದ ತೊಂದರೆ, ಜ್ವರ, ಕೆಮ್ಮು, ನೆಗಡಿ ಅಂತಹ ರೋಗ ಲಕ್ಷಣಗಳನ್ನು ಹೊಂದಿರುವವರಿಗೆ ದೇವಾಲಯ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ಮಾರ್ಟ್ ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಬೇಕು. 65 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಪ್ರವೇಶ ನಿಷೇಧಿಸಿದೆ. ದೇವಾಲಯದ ವಸತಿ ಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ದಾಸೋಹವಿರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಇನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲು ಬಹುತೇಕ ಈ ನಿಯಮಗಳೆ ಇವೆ.

Scroll to Top