ಈ ಬಾರಿ 10 ದಿನ ಮುಂಚಿತವಾಗಿ ಜಂಬೂ ಸವಾರಿ..!

ಮೈಸೂರು: 2019ರ ಸಾಲಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 10 ದಿನಗಳು ಮುಂಚಿತವಾಗಿ ಆರಂಭವಾಗಲಿದೆ. ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 28ರಂದು ಚಾಲನೆ ದೊರೆಯಲಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 8ರಂದು ಜರುಗಲಿದೆ.

ಸಾಮಾನ್ಯವಾಗಿ ಅಕ್ಟೋಬರ್ 3 ಅಥವಾ 4ನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಸೆಪ್ಟಂಬರ್ ಅಂತ್ಯದಲ್ಲೇ ನಾಡಹಬ್ಬ ಆರಂಭವಾಗಲಿದ್ದು, 10 ದಿನಗಳ ಮುಂಚಿತವಾಗಿ ದಸರಾ ಶುರುವಾಗಲಿದೆ.

ಸೆ.28 ರಂದು ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ 2019ರ ದಸರಾ ಮಹೋತ್ಸವವನ್ನು ಉದ್ಘಾಟಿಸಲಾಗುತ್ತದೆ. ಅ.8ರಂದು ಅದ್ದೂರಿಯಾಗಿ ವಿಜಯದಶಮಿ ಮೆರವಣಿಗೆಗೆ ಅರಮನೆ ಅಂಗಳದಿಂದ ಚಾಲನೆ ಸಿಗಲಿದೆ. ಅದೇ ದಿನ ಸಂಜೆ ವರ್ಣರಂಜಿತ ಪಂಜಿನ ಕವಾಯತು ಕಾರ್ಯಕ್ರಮ ನಡೆಯಲಿದೆ. ಕಳೆದ ವರ್ಷ ಅಕ್ಟೋಬರ್ 10ಕ್ಕೆ ದಸರಾ ಚಾಲನೆ, ಅ.19ರಂದು ಜಂಬೂ ಸವಾರಿ ಮೆರವಣಿಗೆ ನಡೆದಿತ್ತು.

ದಸರಾ ಪೂರ್ವ ತಯಾರಿ ಕುರಿತು ಚರ್ಚಿಸಲು ಜುಲೈ ಮೊದಲ ವಾರದಲ್ಲೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆಯನ್ನು ಬೆಂಗಳೂರಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.

ನಂತರ ಸಭೆಯ ತೀರ್ಮಾನದಂತೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪಾಲಿಕೆ, ಮುಡಾ ಅಧಿಕಾರಿಗಳು ಸಿದ್ಧತಾ ಕಾರ್ಯದಲ್ಲಿ ತೊಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

Scroll to Top