ಸುಸ್ಥಿರ ನಗರವನ್ನಾಗಿಸಲು ವಿಶ್ವಸಂಸ್ಥೆಯಿಂದ ಅನುದಾನ: ರಾಜ್ಯದ ಏಕೈಕ ನಗರವಾಗಿ ಮೈಸೂರು ಆಯ್ಕೆ

helicopter-ride-in-mysuru-3

ಮೈಸೂರು: ಯುನಿಡೋ (ಯುನೈಟೆಡ್‌ ನೇಷನ್ಸ್ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆರ್ಗನೈಸೇಶನ್) ಸಂಸ್ಥೆಯು ಸುಸ್ಥಿರ ನಗರಗಳ ಸ್ಥಾಪನೆಗೆ ಒತ್ತು ನೀಡಲಿದ್ದು, ಭಾರತದಲ್ಲಿ ಪೈಲೆಟ್ ಪ್ರಾಜೆಕ್ಟ್‌ ಆಗಿ ಮೈಸೂರು ಸೇರಿದಂತೆ ಐದು ನಗರಗಳನ್ನು ಆಯ್ಕೆ ಮಾಡಿಕೊಂಡಿದೆ.

ಮೈಸೂರು, ವಿಜಯವಾಡ, ಗುಂಟೂರು, ಭೋಪಾಲ್ ಮತ್ತು ಜಯಪುರ ನಗರ ಪಾಲಿಕೆಗಳು ಪರಿಸರ ಸಂರಕ್ಷಣೆ ಉದ್ದೇಶದಿಂದ ನಾನಾ ಯೋಜನೆಗಳ ಅನುಷ್ಠಾನಕ್ಕೆ ಆಯ್ಕೆಯಾಗಿದೆ‌.

ಪರಿಸರ ಸಂರಕ್ಷಣೆ ಉದ್ದೇಶದಿಂದ ದೇಶದ ಐದು ಮಹಾನಗರ ಪಾಲಿಕೆಗಳಿಗೆ ಪರಿಸರ ಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಸಹಾಯ ನೀಡುತ್ತಿರುವ ಯುನಿಡೋ ಸಂಸ್ಥೆಯು ಮೈಸೂರು ಮಹಾನಗರ ಪಾಲಿಕೆಯ ಎರಡು ಯೋಜನೆಗಳಿಗೆ 10.5 ಕೋಟಿ ರೂ ಅನುದಾನ ನೀಡಲಿದೆ.

helicopter-ride-in-mysuru-2

ಮೈಸೂರಿನಲ್ಲಿ ಕಸದಿಂದ ಇಂಧನ ಶಕ್ತಿ ಉತ್ಪಾದಿಸುವ 100 ಟನ್ ಸಾಮರ್ಥ್ಯದ ಘಟಕ ಹಾಗೂ ತರಕಾರಿ ತ್ಯಾಜ್ಯ ಹಾಗೂ ಪ್ರಾಣಿಜನ್ಯ ತ್ಯಾಜ್ಯಗಳಿಂದ ಇಂಧನ ಶಕ್ತಿ ಉತ್ಪಾದಿಸುವ 5 ಟನ್ ಸಾಮರ್ಥ್ಯದ ಘಟಕ ನಿರ್ಮಿಸಲು ಒಟ್ಟು 10.5 ಕೋಟಿ ನೀಡಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿಗಾಗುವ ಅನುಕೂಲ:

ಸದ್ಯ ನಗರದಲ್ಲಿ ನಿತ್ಯವೂ 400 ಟನ್ ಕಸ ಉತ್ಪತ್ತಿಯಾಗುತ್ತಿದ್ದು, 200 ಟನ್ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಡಲಾಗುತ್ತಿದೆ. ಆದರೆ, ಇನ್ನುಳಿದ ಕಸ ದಿನೇದಿನೇ ದೊಡ್ಡ ರಾಶಿಯಾಗಿ ಬೆಳೆಯುತ್ತಿದೆ. ಇದರಿಂದಾಗಿ ವಿದ್ಯಾರಣ್ಯಪುರಂನ ನಿವಾಸಿಗಳು ಕೊಳೆತ ಕಸದ ವಾಸನೆ ತಾಳಲಾಗದೆ ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಸದಿಂದ ಶಕ್ತಿ ಉತ್ಪಾದಿಸುವ 100 ಟನ್ ಸಾಮರ್ಥ್ಯದ ಘಟಕ ಹಾಗೂ ತರಕಾರಿ ತ್ಯಾಜ್ಯಗಳಿಂದ ಇಂಧನ ಉತ್ಪಾದಿಸುವ 5 ಟನ್ ಸಾಮರ್ಥ್ಯದ ಘಟಕ ನಿರ್ಮಾಣಗೊಂಡಲ್ಲಿ ಹೆಚ್ಚುವರಿಯಾಗಿ ಒಟ್ಟು 105 ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ‌.

Scroll to Top