ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅಧ್ಯಕ್ಷೆ ಅವರಿಗೆ ‘ಗೌರವ ಡಾಕ್ಟರೇಟ್’ ಲಭಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಅವರು ಈ ವಿಷಯ ತಿಳಿಸಿದರು. ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಅ.19 ರಂದು ಹಮ್ಮಿಕೊಂಡಿರುವ 100 ಘಟಿಕೋತ್ಸವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿ ಅವರು ಕೈಗೊಂಡಿರುವ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಹಾಗೂ ಅವರ ವೈಯುಕ್ತಿಕ ಸಾಧನೆ ಪರಿಗಣಿಸಿ ಅವರಿಗೆ ಮೈಸೂರು ವಿವಿಯ ಈ ಸಾಲಿನ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಇನ್ನು ಕೊರೋನಾ ಹಿನ್ನಲೆ ಖುದ್ದು ಸುಧಾಮೂರ್ತಿ ಅವರೇ ಆಗಮಿಸಿ ಗೌರವ ಡಾಕ್ಟರೇಟ್ ಸ್ವೀಕರಿಸುವ ಪರಿಸ್ಥಿತಿ ಇಲ್ಲ. ಆದ್ದರಿಂದ ಘಟಿಕೋತ್ಸವದ ಬಳಿಕ ಅವರ ನಿವಾಸಕ್ಕೆ ತೆರಳಿ ವಿವಿ ವತಿಯಿಂದಲೇ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.