ಮಾಲೀಕನ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವುವಂತಹ ‘ಪಶು ಸಂಜೀವಿನಿ’ ಯೋಜನೆಗೆ ಮೈಸೂರಿನಲ್ಲಿ ಚಾಲನೆ

ಮೈಸೂರು: ಜಾನುವಾರುಗಳ ಮಾಲೀಕರಿಗೆ ಅನುಕೂಲವಾಗುವ ಪಶು ಚಿಕಿತ್ಸಾ ವಾಹನವು ವೈದ್ಯರೊಂದಿಗೆ ಮಾಲೀಕನ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವುವಂತಹ ಪಶು ಸಂಜೀವಿನಿ ಯೋಜನೆಗೆ ಮೈಸೂರಿನಲ್ಲಿ ಚಾಲನೆ ದೊರೆತಿದೆ.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವ ಮಾದರಿಯಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲು ರೈತಾಪಿ ವರ್ಗದವರಿಗೆ ಜಾನುವಾರು ಮಾಲೀಕರಿಗೆ ಅನುಕೂಲವಾಗುವಂತೆ ಮನೆ ಬಾಗಿಲಿಗೆ ಪಶುಪಾಲನಾ & ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಸೇವೆ ಒದಗಿಸಲು ಸುಸಜ್ಜಿತ ಆ್ಯಂಬುಲೆನ್ಸ್ ಒದಗಿಸಿ ನುರಿತ ವೈದ್ಯರು/ಅರೆತಾಂತ್ರಿಕ ಸಿಬ್ಬಂದಿ, ಔಷಧಿ, ಸಲಕರಣೆಗಳನ್ನೊಳಗೊಂಡಂತೆ ಮನೆ ಬಾಗಿಲಿಗೆ ಸೇವೆ ನೀಡುತ್ತಿದ್ದು ಇಂದು ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಶಸ್ತ್ರ ಚಿಕಿತ್ಸಾ ವಾಹನ ‘ಪಶು ಸಂಜೀವಿನಿ’ ಸುಸಜ್ಜಿತ ಆಂಬುಲೆನ್ಸ್ ಸೇವೆಯನ್ನು ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾ ಪಂಚಾಯತ್ ಎದುರು ಲೋಕಾರ್ಪಣೆಗೊಳಿಸಿದರು.

ಜಾನುವಾರುಗಳಿಗೆ ತೊಂದರೆಯಾದಲ್ಲಿ 1962 ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ವೈದ್ಯರ ಜೊತೆಯಲ್ಲಿಯೇ ಮಾಲೀಕನ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.

ಈ ಸಂದರ್ಭ ಮಾತನಾಡಿದ ಅವರು ಈ ತುರ್ತು ಚಿಕಿತ್ಸಾ ಸುಸಜ್ಜಿತ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ, 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 200 ಕೆ.ಜಿ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಟೇಬಲ್, ಹವಾ ನಿಯಂತ್ರಣ ವ್ಯವಸ್ಥೆ, ಪಶುವೈದ್ಯರು & ಸಿಬ್ಬಂದಿ ಕುಳಿತುಕೊಳ್ಳು ಆಸನ, ವಾಷ್ಬೇಸಿನ್, 100 ವ್ಯಾಟ್ಸ್ ಲೆಡ್ ಲೈಟ್, ಆಮ್ಲಜನಕ ಸಫೋರ್ಟ್ ಸಿಸ್ಟಂ ಅಳವಡಿಕೆ, ಆಕಸ್ಮಿಕ ಬೆಂಕಿ ಅನಾಹುತ ನಿವಾರಣೆ ಉಪಕರಣ, ಜಾನುವಾರುಗಳ ಚಿಕಿತ್ಸೆಗೆ ಅವಶ್ಯಕವಾದ ಶಸ್ತ್ರ ಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳು, ಪ್ರಸೂತಿ ಕಿಟ್, ಹಾಗೂ ಇತರೆ ಉಪಕರಣಗಳನ್ನು ಅಳವಡಿಸುವ ಕಪಾಟುಗಳ ವ್ಯವಸ್ಥೆಗಳನ್ನೊಳಗೊಂಡ ಜಾನುವಾರುಗಳಿಗೆ ಅವಶ್ಯಕ ಹಾಗೂ ತುರ್ತು ಚಿಕಿತ್ಸೆ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ, ಸಾಮಾನ್ಯವಾಗಿ ಜಾನುವಾರುಗಳಲ್ಲಿ ಎದುರಾಗುವ ತುರ್ತು ಸಂದರ್ಭಗಳಾದ, ಜಾನುವಾರುಗಳಿಗೆ ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ವಿಷ ಪ್ರಾಷನ, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆ ಮುರಿತ, ಅಂತ್ರಾಕ್ಸ್, ಚಪ್ಪೆರೋಗ, ಗಳಲೆರೋಗ, ಕೆಚ್ಚಲಬಾವು, ವಿವಿಧ ರೋಗೋದ್ರೇಕಗಳು ಹಾಗೂ ಸಾಧಾರಣ ಚಿಕಿತ್ಸೆಗೆ ಸ್ಪಂದಿಸದ ಸಮಯದಲ್ಲಿ ಈ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾಲಯಗಳ ವಾಹನದ ಮೂಲಕ ರೈತರ ಮನೆ ಬಾಗಿಲಿಗೆ, ದನ, ಎಮ್ಮೆ, ಕುರಿ, ಮೇಕೆ, ಹಂದಿ ಇನ್ನಿತರ ಜಾನುವಾರುಗಳಿಗ ತಜ್ಞ ಪಶುವೈದ್ಯರ ಮೂಲಕ ತುರ್ತು ಮತ್ತು ತಜ್ಞ ಪಶುವೈದ್ಯಕೀಯ ಸೇವೆಯನ್ನು ನೀಡುವುದರ ಮೂಲಕ ಜಾನುವಾರುಗಳ ಪ್ರಾಣ ಹಾನಿಯನ್ನು ತಡೆಗಟ್ಟಿ ರೈತರಿಗೆ ಉಂಟಾಗಬಹುದಾದ ಆರ್ಥಿಕ ನಷ್ಠವನ್ನು ತಪ್ಪಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲೆಯಾದ್ಯಂತ ವಾರದಲ್ಲಿ ಒಂದು ದಿವಸ ಶಸ್ತ್ರ ಚಿಕಿತ್ಸಾ ತಜ್ಞರು & ಪ್ರಸೂತಿ ತಜ್ಞರು ಬರಡು ರಾಸುಗಳ ಚಿಕಿತ್ಸಾ ಶಿಬಿರಗಳಲ್ಲಿ ಭಾಗವಹಿಸಿ ಇಲಾಖೆಯ ಸೇವೆಯನ್ನು ಒದಗಿಸಲು ಉದ್ದೇಶಿಸಲಾಗಿದೆ. ಈ ಸೇವೆಯನ್ನು ಪಶುಪಾಲಕರ ಸಹಾಯವಾಣಿ ಸಂಖ್ಯೆ 1962 ಸಂಯೋಜಿಸಿ ಅವಶ್ಯಕ & ತುರ್ತು ಸೇವೆಯನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.

Scroll to Top