ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಚಾಲನೆ

ಮೈಸೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ವಿಷ್ಣುವರ್ಧನ್ ಪತ್ನಿ ಭಾರತೀ ವಿಷ್ಣುವರ್ಧನ್ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸ್ಮಾರಕ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಅರ್ಪಣೆ ಮಾಡುತ್ತಿದ್ದೇವೆ. ವಿಷ್ಣುವರ್ಧನ್ ಕನಸು ಕೂಡ ಇದೆ ಆಗಿತ್ತು ಎಂದು ಹಿರಿಯ ನಟಿ, ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದೆ. ಕಳೆದ 10 ವರ್ಷದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಪುನಃ ಆರಂಭವಾಗಿರುವ ಕಾಮಗಾರಿಯನ್ನು ನೋಡಲು ಬಂದ ಭಾರತಿ ಅವರು ಸ್ಥಳೀಯರು ಹಾಗೂ ಅಧಿಕಾರಿಗಳ ಜೊತೆ ಸ್ಮಾರಕ ನಿರ್ಮಾಣದ ಕುರಿತು ಮಾಹಿತಿ ಪಡೆದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಾರು 5 ಎಕರೆ ವ್ಯಾಪ್ತಿಯ 11 ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸರ್ಕಾರದಿಂದ ಈ ಹಣ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು ಎಂದು ಹೇಳಿದರು.

ಮೈಸೂರು ಉದ್ಬೂರಿನ ಹಳಾಲು ಗ್ರಾಮದಲ್ಲಿ ಮೈಸೂರು-ಎಚ್.ಡಿ.ಕೋಟೆ ಮುಖ್ಯ ರಸ್ತೆ ಪಕ್ಕದಲ್ಲಿ ಸ್ಮಾರಕ ಸ್ಥಳ ಇದೆ. ಮೊದಲಿಗೆ 5 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಕ್ಲೀನ್ ಮಾಡಿಸುತ್ತಿದ್ದು, ಜೆಸಿಬಿ, ಟ್ರಾಕ್ಟರ್ ಸಹಾಯದೊಂದಿಗೆ ಕಾಮಗಾರಿ ಆರಂಭವಾಗಿದೆ. ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಸಮಿತಿಗೆ ಜಮೀನು ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ.

Scroll to Top