ವಿಶ್ವಕ್ಕೆ ಯೋಗ ಗುರು ಬಿಕೆಎಸ್‌ ಅಯ್ಯಂಗಾರರಿಗೂ ಮೈಸೂರಿಗೂ ಇತ್ತು ಅವಿನಾಭವ ಸಂಬಂಧ..!

ಮೈಸೂರು: ಯೋಗಗುರು ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯುವುದಿಲ್ಲ. ಅದೇ ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ. ಬಿಕೆಎಸ್‌ ಅಯ್ಯಂಗಾರ್‌ ಎಂದರೆ ತಕ್ಷಣ ಅರ್ಥವಾಗುತ್ತದೆ.

ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ ಯೋಗ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಯೋಗಾಚಾರ್ಯ ಬಿ. ಕೆ. ಎಸ್‌.ಅಯ್ಯಂಗಾರ್‌ ಅವರ ಕೊಡುಗೆ ಅಪಾರವಾದದ್ದು.

ಶ್ರೇಷ್ಠ ಯೋಗ ಶಿಕ್ಷಕರಾಗಿದ್ದ ಬಿಕೆಎಸ್ ಅಯ್ಯಂಗಾರರು ಹುಟ್ಟಿದ್ದು 4 ಡಿಸೆಂಬರ್ 1918ರಂದು ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಜನಿಸಿದರು. ಕನ್ನಡದ ಕಣ್ವನೆಂದು ಹೆಸರು ಗಳಿಸಿದ ಬಿ.ಎಮ್.ಶ್ರೀಕಂಠಯ್ಯ ಇದೇ ಊರವರು. ಇವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಒಂಬತ್ತು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕಡುಬಡತನದ ಬಾಲ್ಯವನ್ನು ಕಂಡ ಇವರು ಸಂಬಂಧಿಕರ ಮನೆಯಲ್ಲೇ ಬೇಳೆದವರು.

ಮೈಸೂರಿಗೂ ಅಯ್ಯಂಗಾರರಿಗೂ ಇದೆ ಅವಿನಾಭವ ಸಂಬಂಧ

ಅಯ್ಯಂಗಾರ್ ಅವರು ತಮ್ಮ ಬಾಲ್ಯಕಾಲದಲ್ಲಿ ಅನಾರೋಗ್ಯದಿಂದ ತತ್ತರಿಸಿ ಹೋಗಿದ್ದರು. ಮೆಟ್ರಿಕ್ಯುಲೇಷನ್ ವರೆಗಷ್ಟೇ ವಿದ್ಯಾಭ್ಯಾಸ ನಡೆಸಿದ ಬಿಕೆಎಸ್ ತಾವು ಅನುಭವಿಸುತ್ತಿದ್ದ ಅಸಹನೀಯ ಖಾಯಿಲೆಗಳಿಂದ ಪಾರಾಗಲು ಯೋಗಾಭ್ಯಾಸದ ಮೊರೆ ಹೋದದ್ದೇ ಮುಂದೆ ಅವರನ್ನು ವಿಶ್ವಯೋಗಾಚಾರ್ಯನನ್ನಾಗುವಂತೆ ಮಾಡಿತ್ತು.

ಹದಿನೈದನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಕಾಲ ಯೋಗಾಭ್ಯಾಸ ನಡೆಸಿದ್ದರು. ಕೃಷ್ಣಮಾಚಾರ್ ಸಹ ಸಾಮಾನ್ಯ ಗುರುವಾಗಿರಲಿಲ್ಲ ಅವರು ಹಿಮಾಲಯದಲ್ಲಿ ಯೋಗಗುರುಗಳಿಂದ ಯೋಗ ವಿದ್ಯಾಭ್ಯಾಸ ಪಡೆದು ಅದನ್ನು ದಕ್ಷಿಣ ಭಾರತದಾದ್ಯಂತ ಪ್ರಚಾರ ಮಾಡಲು ಮೈಸೂರು ಒಡೆಯರ ಆಶ್ರಯ ಪಡೆದಿದ್ದರು.

ಒಡೆಯರ ಯೋಗಶಾಲೆಯಲ್ಲಿ ಪ್ರಧಾನ ಯೋಗಶಿಕ್ಷಕರಾಗಿದ್ದ ಕೃಷ್ಣಮಾಚಾರ್ ಅವರ ಮಾರ್ಗದರ್ಶನದಲ್ಲಿ ಬಿಕೆಎಸ್ ತಮ್ಮೆಲ್ಲಾ ಖಾಯಿಲೆಗಳಿಗೆ ಪರಿಹಾರ ಕಂಡುಕೊಂಡರು.

ಹೀಗೆ ಯೋಗ ಶಿಕ್ಷಣದ ಬಗ್ಗೆ ಒಲವು ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ಬೆಳೆದ ಅಯ್ಯಂಗಾರ್ ಅವರು ಇದಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ಕಾಯಕವನ್ನು ಮಾಡಬೇಕು ಎಂದು ದೂರದ ಮಹಾರಾಷ್ಟ್ರದ ಪುಣೆಗೆ ಹೋದರು. ಭಾಷೆ ಗೊತ್ತಿಲ್ಲದ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಸಾಬೀತು ಪಡಿಸಿದರು. ಕೆಲವೇ ವರ್ಷಗಳಲ್ಲಿ ತಮ್ಮ ಸತತ ಯೋಗಾಧ್ಯಯನ ಮತ್ತು ನಿರಂತರ ಪರಿಶ್ರಮವುಳ್ಳ ಕಾಯಕ ಸಾಧನೆಗಳಿಂದ ದೇಶವಿ-ದೇಶಗಳಲ್ಲಿ ಪ್ರಖ್ಯಾತಿಗಳಿಸಿದರು.

ಘಟಾನುಘಟಿಗಳಿಗೆ ಗುರುಗಳು ಇವರು

ಬೆಲ್ಜಿಯಂ ರಾಣಿ ಎಲಿಜಬೆತ್, ಆರನೇ ಪೋಪ್ ಪಾಲ್ ಇವರ ಶಿಷ್ಯರಾಗಿದ್ದರು. ಇನ್ನು ಭಾರತದಲ್ಲಿ ನೆಹರು, ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ದಿಲೀಪ್ಕುಮಾರ್ ರಾಯ್, ಸಂಗೀತಗಾರ ಅಮ್ಜದ್ ಆಲಿಖಾನ್, ಕಲಾವಿದ ಆರ್.ಕೆ. ಲಕ್ಷ್ಮಣ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಮಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಕಿರಣ್ ಮೋರೆ, ಜಹೀರ್ ಖಾನ್ ಹೀಗೆ ಅನೇಕ ಮಹನೀಯರಿಗೆ ಬಿಕೆಎಸ್ ಯೋಗ ಗುರುಗಳಾಗಿದ್ದರು.

ಪ್ರಶಸ್ತಿ-ಪುರಸ್ಕಾರಗಳು

ವಿಶ್ವದ ನಾನಾ ಕಡೆ ಯೋಗ ಶಿಕ್ಷಣದ ಮೂಲಕ ಹೆಸರಾದ ಬಿಕೆಎಸ್ ಅಯ್ಯಂಗಾರ್ ಅವರಿಗೆ ಸಾಕಷ್ಟು ಮನ್ನಣೆ ಗೌರವಗಳು ಅರಸಿ ಬಂದಿದ್ದವು. ಅವುಗಳಲ್ಲಿ ಪದ್ಮಶ್ರೀ(1991), ಪದ್ಮ ಭೂಷಣ(2002), ಪದ್ಮ ವಿಭೂಷಣ(2014) ಪ್ರಶಸ್ತಿ ಅತ್ಯಂತ ಶ್ರೇಷ್ಠವಾದದ್ದು.

ಇನ್ನು ಜಗದ್ವಿಖ್ಯಾತ ಟೈಮ್ಸ್ ನಿಯತಕಾಲಿಕವು 2004ರಲ್ಲಿ ಬಿಕೆಎಸ್ ಅಯ್ಯಂಗಾರರನ್ನು ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿತ್ತು.

2011ರಲ್ಲಿ ಚೀನಾ ಅಂಚೆ ಇಲಾಖೆ ಬಿಕೆಎಸ್ ಅವರ ಗೌರವಾರ್ಥ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿತ್ತು. ಆಕ್ಸ್ ಫರ್ಡ್ ಶಬ್ದಕೋಶದಲ್ಲಿ ಸಹ “ಅಯ್ಯಂಗಾರ್” ಎಂಬ ಶಬ್ದವಿದ್ದು ಇದಕ್ಕೆ “ದೇಹದ ಪರಿಪೂರ್ಣ ಭಂಗಿಗಾಗಿ ಬೆಲ್ಟ್, ಮರದ ಇಟ್ಟಿಗೆಯಂತಹಾ ಸಾಧನ ಬಳಸುವ ಹಠಯೋಗದ ಒಂದು ಮಾರ್ಗ” ಎಂದು ಅರ್ಥ ನೀಡಲಾಗಿದೆ.

ಡಿಸೆಂಬರ್2015ರಲ್ಲಿ ಅಯ್ಯಂಗಾರರ 97ನೇ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ರಚಿಸಿ ಅವರಿಗೆ ಗೌರವ ಸಮರ್ಪಿಸಿತ್ತು.

“ನನ್ನ ದೇಹವೇ ಒಂದು ದೇವಾಲಯ, ಆಸನಗಳೇ ನನ್ನ ಪೂಜೆ, ನಾವು ಪ್ರಾಣಿಗಳಂತೆ ಭೂಮಿಮೇಲೆ ನಡೆದಾಡುತ್ತೇವೆ. ಆದರೆ ಒಂದು ದೈವಿಕ ಚೈತನ್ಯವನ್ನು ಹೊತ್ತಿರುವ ಕಾರಣ ನಕ್ಷತ್ರಗಳೊಡನೆ ತಿರುಗಬಲ್ಲೆವು” ಎಂದಿದ್ದ ಬಿಕೆಎಸ್ ಅಯ್ಯಂಗಾರ್ 2014, ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ಕಾಲವಶರಾದರು.

Leave a Comment

Scroll to Top