ಮತ್ತಷ್ಟು ಹೆಚ್ಚಾದ ಕೊರೊನಾ ಆತಂಕ, ಮೈಸೂರು ಜಿಲ್ಲೆಯಾದ್ಯಂತ 144 ಜಾರಿ

ಮೈಸೂರು: ದೇಶಾದ್ಯಂತ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಸಭೆ, ಸಮಾರಂಭ, ಸಾಮೂಹಿಕ ವಿವಾಹ, ಜಾತ್ರಾಮಹೋತ್ಸವ, ದೇವರ ಉತ್ಸವಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಗುಲಗಳಲ್ಲಿ ಪ್ರಸಾದ ವಿತರಣೆಗೂ ನಿರ್ಬಂಧ ವಿಧಿಸಲಾಗಿದೆ. ದೇಗುಲಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜಾವಿಧಿಗಳಿಗೆ ನಿರ್ಬಂಧ ಇಲ್ಲ. ಆದರೆ ದೇಗುಲಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮುಂದಿನ ಆದೇಶದವರೆಗೂ ನಿರ್ಬಂಧ ಅನ್ವಯ ಆಗಲಿದೆ ಎಂದರು.

ಕೋವಿಡ್-19 ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮೂಹಿಕವಾಗಿ ನಡೆಯುವ ಆಹಾರ ಮತ್ತು ಪ್ರಸಾದ ವಿತರಣೆಯನ್ನು ಸಂತೆ/ಜಾತ್ರೆ/ಉತ್ಸವ/ಸಾಮೂಹಿಕ ವಿವಾಹಗಳು ಇನ್ನಿತರ ಜನಸಂದಣಿ ಸೇರುವ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸಾರ್ಕಾರದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ 17/3/2020ರಿಂದ ಮುಂದಿನ ಆದೇಶದವರೆಗೆ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರಸಂಕಿರಣಗಳು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಮದುವೆ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಯೋಜಿಸುವಂತೆ ಸರ್ಕಾರದಿಂದಲೇ ಸೂಚನೆ ಬಂದಿದ್ದು, ಅದನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಮೈಸೂರಿನಲ್ಲಿ 107 ಜನರ ಮೇಲೆ ನಿಗಾ ಇಡಲಾಗಿತ್ತು. ಸದ್ಯ 51 ಜನ ಮನೆಯಲ್ಲಿಯೇ ನಿಗಾದಲ್ಲಿ ಇದ್ದಾರೆ. 8 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 7 ನೆಗೆಟಿವ್ ಬಂದಿದೆ. ಒಬ್ಬರದ್ದು ಬಾಕಿ ಇದೆ. ಅವರು ಆಸ್ಪತ್ರೆಯಲ್ಲಿ ಇದ್ದಾರೆ. ಇದುವರೆಗೂ ಮೈಸೂರಿನಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದರು.

ಕೊರೋನಾ ವೈರಸ್‌ಗೆ ಪ್ರತ್ಯೇಕ ಔಷಧಿ‌ ಇಲ್ಲ. ಕೆಮ್ಮು, ನೆಗಡಿ ನಿಯಂತ್ರಣಕ್ಕೆ ಔಷಧಿ ನೀಡಿ‌ ನಿಗಾ ವಹಿಸುತ್ತೇವೆ. ಕೆಮ್ಮು ನೆಗಡಿ ಹೆಚ್ಚಿದ್ದವರಿಗೆ 14 ದಿನಗಳ ಕಾಲ ಮನೆಯಲ್ಲೇ ಉಳಿಸುತ್ತಿದ್ದೇವೆ. ಶಂಕಿತರು ಕಂಡು ಬಂದರೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡುತ್ತೇವೆ. ಮೈಸೂರಿನ‌ ಹೊಸ ಜಿಲ್ಲಾಸ್ಪತ್ರೆಯನ್ನು ಐಸೋಲೇಷನ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ್ದೇವೆ. ಹೊಸ ಆಸ್ಪತ್ರೆಗೆ ಬೆಡ್‌ ಪೀಠೋಪಕರಣ ಒದಗಿಸಲು ದಾನಿಗಳು‌ ಮುಂದೆ ಬಂದಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ, ಅಡಿಶನಲ್ ಎಸ್ಪಿ ಸ್ನೇಹ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Scroll to Top