ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೆ ಅನುಮತಿ ಪಡೆಯುವುದು ಕಡ್ಡಾಯ

ಮೈಸೂರು: ಕೋವಿಡ್-19 ಸಾಂಕ್ರಾಮಿಕ ರೋಗವು ಎಲ್ಲೆಡೆ ಹರಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳಿಗೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಕೆಲವು ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದ್ದಾರೆ.

ಎಲ್ಲಾ ಒಳಾಂಗಣ ಮತ್ತು ಹೊರಾಂಗಣದಲ್ಲಿ ಆಯೋಜಿಸುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಆಯೋಜಿಸುವ ಕಾರ್ಯಕ್ರಮಕ್ಕೆ ಕೋವಿಡ್-19 ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಒಬ್ಬರು ಜವಾಬ್ದಾರಿಯುತ ಪ್ರತಿನಿಧಿಯನ್ನು ಆಯೋಜಕರೇ ನೇಮಿಸಿ ಅವರ ಮುಖಾಂತರ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸುವುದು.

ಒಳಾಂಗಣ ಸ್ಥಳಗಳಲ್ಲಿ 200 ಜನರ ಗರಿಷ್ಠ ಮಿತಿ ಒಳಪಟ್ಟು ಸಭಾ ಭವನದ ಒಟ್ಟು ಸಾರ್ಮಥ್ರ್ಯದ ಗರಿಷ್ಠ ಶೇಕಡ 50% ರಷ್ಟಕ್ಕೆ ಹಾಗೂ ಹೊರಾಂಗಣ ಸ್ಥಳಗಳಲ್ಲಿ, ಮೈದಾನ/ಸ್ಥಳದ ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಅಂತರದ ಕಟ್ಟುನಿಟ್ಟಿನ ಪಾಲನೆಯ ಅನುಗುಣವಾಗಿ ಅನುಮತಿ ನೀಡಲಾಗುವುದು.

ವ್ಯಾಪಾರ ಮಳಿಗೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಧಾರ್ಮಿಕ ಸ್ಥಳ, ಸಿನಿಮಾ ಮಂದಿರ, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಒಬ್ಬರು ಜವಾಬ್ದಾರಿಯುತ ಅನುಷ್ಠಾನ ಪ್ರತಿನಿಧಿಯನ್ನು ನೇಮಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವುದು. ಠಾಣಾಧಿಕಾರಿಗಳು ಈ ಪಟ್ಟಿಯನ್ನು ಠಾಣಾವಾರು ನಿರ್ವಹಿಸಿ ಅನುಷ್ಠಾನ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು.

ಕೋವಿಡ್-19 ಮಾರ್ಗಸೂಚಿ “ಅನುಷ್ಠಾನ ಪ್ರತಿನಿಧಿ”ಗಳ ಕರ್ತವ್ಯಗಳನ್ನು ಆದೇಶದಲ್ಲಿ ತಿಳಿಸಲಾಗಿದ್ದು, ತಮ್ಮ ಉಸ್ತುವಾರಿಗೆ ಬರುವ ಸಭಾ ಭವನ/ವಾಣಿಜ್ಯ ಮಳಿಗೆ/ಹೋಟೆಲ್/ಬಹಿರಂಗ ಕಾರ್ಯಕ್ರಮ ಇತ್ಯಾದಿಗಳಲ್ಲಿ ಕೋವಿಡ್-19 ಅನ್ನು ತಡೆಗಟ್ಟಲು ಸರ್ಕಾರದಿಂದ ವಿಧಿಸಿರುವ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಸಂಪೂರ್ಣ ಜವಾಬ್ದಾರಿ ವಹಿಸುವುದು ಮತ್ತು ಸ್ಥಳದಲ್ಲಿ ಉಪಸ್ಥಿತರಿಬೇಕು.

ಕಾರ್ಯಕ್ರಮ ಆಯೋಜಿಸಲು ನಿಗದಿಪಡಿಸಿದ ಸಭಾ ಭವನ ಮತ್ತು ಹೊರಾಂಗಣಗಳಲ್ಲಿ ಸೇರುವ ಜನರಿಗೆ ಸಾಮಾಜಿಕ ಅಂತರವನ್ನು ಗುರುತಿಸಿ, ಅದರಂತೆ ಆಸನದ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಜನರ ಸಂಖ್ಯೆಯನ್ನು ಮೀರದಂತೆ ಕ್ರಮವಹಿಸಬೇಕು.

ಕಾರ್ಯಕ್ರಮಗಳನ್ನು ಆಯೋಜಿಸುವ ಸಭಾಂಗಣ ಹಾಗೂ ಮೈದಾನಗಳ ಪ್ರವೇಶದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜರ್‍ನ ವ್ಯವಸ್ಥೆ ಕಲ್ಪಿಸುವುದು ಹಾಗೂ ಶುಚಿತ್ವ ಕಾಪಾಡುವುದು. ಕೋವಿಡ್-19 ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಅನುವಾಗುವಂತೆ ಸ್ವಯಂಸೇವಕರನ್ನು ತಾವೇ ನೇಮಕ ಮಾಡುವುದು. ಹಾಗೂ ಈ ಕುರಿತು ಪೊಲೀಸರ ಸಹಾಯವನ್ನು ಪಡೆಯುವುದು.

ಕೋವಿಡ್-19 ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಪ್ರತಿನಿಧಿಯು ಸರ್ಕಾರವು ವಿಧಿಸಿರುವ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಪೂರ್ಣ ಜವಾಬ್ದಾರಿ ವಹಿಸುವುದು.

ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ಕೋವಿಡ್-19 ಮಾರ್ಗಸೂಚಿ ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಿ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದು ಕೋವಿಡ್-19 ರ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯ ಕ್ರಮವಹಿಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿರುತ್ತಾರೆ.

Share on facebook
Facebook
Share on twitter
Twitter
Share on pinterest
Pinterest
Share on whatsapp
WhatsApp

Leave a Comment

Your email address will not be published. Required fields are marked *

Scroll to Top