ಇನ್ಮುಂದೆ ಆರ್‌ಸಿ ಬುಕ್, ಇನ್ಶುರೆನ್ಸ್, ಲೈಸೆನ್ಸ್ ಜೊತೆಯಲ್ಲಿ ಕೊಂಡೊಯ್ಯುವ ಅಗತ್ಯವಿಲ್ಲ..!

ಮೈಸೂರು: ಕೇಂದ್ರ ಸರ್ಕಾರ ನೂತನ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ. ಇದರಿಂದಾಗಿ ಇನ್ನುಮುಂದೆ ನೀವು ನಿಮ್ಮ ವಾಹನದಲ್ಲಿ ಆರ್​ಸಿ ಬುಕ್, ಇನ್ಶುರೆನ್ಸ್​, ಲೈಸೆನ್ಸ್​ ಇಟ್ಟುಕೊಂಡು ಓಡಾಡಬೇಕಾಗಿಲ್ಲ.

ಹೀಗಾಗಿ, ಇನ್ನುಮುಂದೆ ಈ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ಡಿಜಿಟಲೀಕರಣಗೊಂಡ ದಾಖಲೆಗಳನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಟ್ಟುಕೊಂಡರೆ ಸಾಕಾಗುತ್ತದೆ. ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪ್ರತಿಗಳನ್ನು ಕೇಂದ್ರ ಸರಕಾರದ ಆನ್‌ಲೈನ್ ಪೋರ್ಟಲ್ ಆದ ಎಂ-ಪರಿವಾಹನ್ ಅಥವಾ ಡಿಜಿಲಾಕರ್ ಆ್ಯಪ್ ಗಳಿಗೆ ಅಪ್‌ಲೋಡ್ ಮಾಡಬಹುದು. ಅಗತ್ಯ ಸಂದರ್ಭದಲ್ಲಿ ಇವುಗಳನ್ನು ದಾಖಲೆಯಾಗಿ ಬಳಸಿಕೊಳ್ಳಬಹುದು.

ಅಕ್ಟೋಬರ್‌ 1ರಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಳ್ಳಲಿವೆ. ಅಲ್ಲದೆ ದೇಶಾದ್ಯಂತ ಏಕರೂಪದ ಆರ್​ಸಿ, ಡ್ರೈವಿಂಗ್ ಲೈಸೆನ್ಸ್​ ನೀಡುವ ವಿಧಾನ ಜಾರಿಗೆ ಬರಲಿದೆ. ಇನ್ನುಮುಂದೆ ಆರ್​ಸಿ ಬುಕ್​ಗಳನ್ನು ಕೂಡ ಎಲೆಕ್ಟ್ರಾನಿಕ್ ಕಾರ್ಡ್​ ರೂಪದಲ್ಲಿ ನೀಡಲಾಗುವುದು. ಡ್ರೈವಿಂಗ್ ಲೈಸೆನ್ಸ್​ ಕಾರ್ಡ್​ ಕೂಡ ಡಿಜಿಟಲೀಕರಣಗೊಳ್ಳಲಿದ್ದು, ಇದರಲ್ಲಿ ಮೈಕ್ರೋ ಚಿಪ್ ಇರಲಿದೆ. ವಾಹನ ಸವಾರರು ಚಾಲನಾ ಪರವಾನಿಗೆ ಹಾಗೂ ಆರ್‌ಸಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಾಗುತ್ತದೆ.

ಅ. 1ರಿಂದ ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಹೊಸ ಕಾರ್ಡ್‌ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್‌ ಇರಲಿದ್ದು, ಕ್ಯೂಆರ್‌ ಕೋಡ್‌ ಇರಲಿದೆ. ಈ ಕಾರ್ಡ್‌ ಗಳು ಎಟಿಎಂ ಕಾರ್ಡ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಡ್ರೈವಿಂಗ್ ಲೈಸೆನ್ಸ್​ನ ಕಾರ್ಡ್​ನಲ್ಲಿರುವ ಚಿಪ್​ನಿಂದಾಗಿ ವಾಹನ ಸವಾರರ ಎಲ್ಲ ಮಾಹಿತಿಗಳನ್ನೂ ಸುಲಭವಾಗಿ ಕಂಡುಹಿಡಿಯಬಹುದು. ಈ ಎಲೆಕ್ಟ್ರಾನಿಕ್ ಕಾರ್ಡ್​ ಮೂಲಕ ವಾಹನ ಸವಾರರ 10 ವರ್ಷದೊಳಗಿನ ವಾಹನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಪಡೆಯಬಹುದು.

Scroll to Top