ನವದೆಹಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ ಕೆ ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ಅವರು ತೀರ್ಪನ್ನು ಪ್ರಕಟಿಸಿದ್ದಾರೆ. ಅನಾರೋಗ್ಯದ ಕಾರಣಗಳಿಂದ ಜಾಮೀನು ಮಂಜೂರು ಮಾಡಲಾಗಿದ್ದು, 25 ಲಕ್ಷ ಬಾಂಡ್, ಪಾಸ್ ಪೋರ್ಟ್ ಒಪ್ಪಿಸಬೇಕು, ದೇಶ ಬಿಟ್ಟು ಹೋಗುವಂತಿಲ್ಲ ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಡಿ.ಕೆ. ಶಿವಕುಮಾರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಜಾರಿ ನಿರ್ದೇಶನಾಲಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ವಾದ ಮಂಡಿಸಿದ್ದರು.
ಡಿ ಕೆ ಶಿವಕುಮಾರ್ ಅವರನ್ನು ಸೆ. 3ರಂದು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿತ್ತು. ಬಳಿಕ ಅ.17ರಂದು ನ್ಯಾಯಾಲಯವು ತನ್ನ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಅ. 25 ರಿಂದ ಡಿಕೆಶಿಯನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರೋಸ್ ಅವೆನ್ಯೂ ಕೋರ್ಟ್ ತಿರಸ್ಕರಿಸಿದ ನಂತರ, ಡಿಕೆಶಿ ದೆಹಲಿ ಹೈಕೋರ್ಟ್‌ಗೆ ತೆರಳಿದ್ದರು. ಈ ಕುರಿತ ವಿಚಾರಣೆಯ ಸಮಯದಲ್ಲಿ 317 ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಪಟ್ಟಿಯನ್ನು ಒಳಗೊಂಡಂತೆ ಹಲವಾರು ದಾಖಲೆಗಳನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.