ಕ್ರಿಕೆಟ್: ಬ್ಯಾಟಿಂಗ್ ದೈತ್ಯ, ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐಪಿಎಲ್ ನ ಪ್ರಸಕ್ತ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ.
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 14 ರನ್ ಗಳ ಜಯ ದಾಖಲಿಸಿ ಶುಭಾರಂಭ ಮಾಡಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ 15 ರನ್ ಬಾರಿಸುತ್ತಿದ್ದಂತೆ 4000 ರನ್ ಪೂರೈಸಿದರು.
ಗೇಲ್ 112 ಪಂದ್ಯಗಳಲ್ಲಿ 4000 ರನ್ ಪೂರೈಸುವ ಮೂಲಕ ಡೇವಿಡ್ ವಾರ್ನರ್ 114 ಪಂದ್ಯಗಳಲ್ಲಿ ಮಾಡಿದ್ದ ಈ ಸಾಧನೆಯನ್ನು ಮುರಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 118 ಪಂದ್ಯಗಳಲ್ಲಿ 4 ಸಾವಿರ ರನ್ ಪೂರೈಸಿ 2ನೇ ಸ್ಥಾನ ಪಡೆದಿದ್ದರು.
ಕ್ರಿಸ್ ಗೇಲ್ ಅಂತಿಮವಾಗಿ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ 79 ರನ್ ಸಿಡಿಸಿದರು. ಗೇಲ್ ಬಿರುಸಿನ ಆಟದಿಂದಾಗಿ ಪಂಜಾಬ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್ ಕಲೆ ಹಾಕಿತು.
ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 170 ರನ್ ಗಳಿಸಲಷ್ಟೇ ಶಕ್ತವಾಯಿತು.