ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

ದಕ್ಷಿಣ ಕನ್ನಡ: ಕಂಬಳ ಕ್ರೀಡೆಯಲ್ಲಿ ಈಗ ದಾಖಲೆಗಳ ಮೇಲೆ ದಾಖಲೆಗಳ ಸುದ್ದಿ. ಕಂಬಳಗದ್ದೆಯ ಉಸೇನ್ ಬೋಲ್ಟ್ ಎಂದು ಕರೆಯಲ್ಪಡುತ್ತಿರುವ ಶ್ರೀನಿವಾಸ ಗೌಡರು ಕೇವಲ 13.62 ಸೆಕೆಂಡ್‌ಗಳಲ್ಲಿ 142.5 ಮೀ. ಓಡಿ ಸುದ್ದಿಯಾದ ಬೆನ್ನಲ್ಲೇ, ಶ್ರೀನಿವಾಸಗೌಡರ ಮಿತ್ರರೂ ಆಗಿರುವ ಮತ್ತೊಬ್ಬ ಕಂಬಳವೀರ ನಿಶಾಂತ್ ಶೆಟ್ಟಿ ಆ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ವೇಣೂರಿನಲ್ಲಿ ಭಾನುವಾರ ನಡೆದ ಕಂಬಳದಲ್ಲಿ 28 ವರ್ಷದ ನಿಶಾಂತ್, ಶ್ರೀನಿವಾಸ ಗೌಡರಿಗಿಂತ 0.07 ಸೆಕೆಂಡ್ ವೇಗವಾಗಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿ ನಿವಾಸಿ ನಿಶಾಂತ್‌ ಶೆಟ್ಟಿ ಅವರು ಕಂಬಳ ಟ್ರ್ಯಾಕ್‌ನ 143 ಮೀ. ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ತಲುಪಿದ್ದಾರೆ. ಶ್ರೀನಿವಾಸ್‌ಗೌಡ ಸಹ ವೇಣೂರಿನ ಕಂಬಳ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದು, ಅವರು 143 ಮೀಟರ್‌ ಗುರಿಯನ್ನು 13.68 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ. ನಿಶಾಂತ್‌ ಶೆಟ್ಟಿ, ಶ್ರೀನಿವಾಸ ಗೌಡರಿಗಿಂತ 0.07 ಸೆಕೆಂಡ್‌ ವೇಗವಾಗಿ ಓಡಿ ಗುರಿ ಮುಟ್ಟಿದ್ದಾರೆ.

ಐಕಳ ಎಂಬಲ್ಲಿ ಫೆ.1ರಂದು ನಡೆದ ಕಂಬಳದಲ್ಲಿ ಶ್ರೀನಿವಾಸ್‌ಗೌಡ ಅವರು 142.5 ಮೀ. ಉದ್ದದ ಟ್ರ್ಯಾಕ್‌ ಅನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು. 2009ರಲ್ಲಿ 9.58 ಸೆಕೆಂಡ್‌ನಲ್ಲಿ 100 ಮೀಟರ್‌ ದೂರವನ್ನು ಓಡಿ ಉಸೇನ್‌ ಬೋಲ್ಟ್‌ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಕಂಬಳ ಕರೆಯ ಓಟ ಮತ್ತು ಟ್ರ್ಯಾಕ್‌ನಲ್ಲಿ ಓಡುವ ಓಟ ಎರಡೂ ಸಾಕಷ್ಟು ವಿಭಿನ್ನವಾದ ಓಟದ ಸ್ಪರ್ಧೆಗಳು.

Leave a Comment

Scroll to Top