2011 ವಿಶ್ವಕಪ್ ಗೆಲುವಿಗೆ 8ರ ಸಂಭ್ರಮ: ದಶಕಗಳ ಬಳಿಕ ಗೆದ್ದ ಐತಿಹಾಸಿಕ ಕ್ಷಣಗಳ ಸಣ್ಣ ಮೆಲುಕು

ಬೆಂಗಳೂರು: ಅಂದಿನ ಇದೇ ದಿನ (2011 ಎಪ್ರಿಲ್ 2) ಭಾರತ ಕ್ರಿಕೆಟ್​ ತಂಡ ಏಕದಿನ ವಿಶ್ವಕಪ್ ಜಯಿಸಿತ್ತು. ಈ ಮೂಲಕ 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿತ್ತು.

ಭಾರತ ಕ್ರಿಕೆಟ್​ ತಂಡ 2011 ರ ವಿಶ್ವಕಪ್​ ಗೆದ್ದು ಇಂದಿಗೆ ಸರಿಯಾಗಿ 8 ವರ್ಷ ಕಳೆದಿದೆ. ಏಪ್ರಿಲ್ 2, 2011′ ಧೋನಿ ನಾಯಕತ್ವ, ದಶಕಗಳ ಬಳಿಕ 2011 ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 8 ವರ್ಷ ಸಂದಿದೆ.

28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಕಿರೀಟ:

1983 ರಲ್ಲಿ ಇಂಗ್ಲೆಡ್​ನಲ್ಲಿ ನಡೆದಿದ್ದ ವಿಶ್ವಕಪ್​ ಅನ್ನ ಕಪೀಲ್​ ದೇವ್​ ಸಾರಥ್ಯದಲ್ಲಿ ಗೆದ್ದಿತ್ತು. ನಂತರ ದಶಕಗಳೇ ಕಳೆದರೂ ವಿಶ್ವಕಪ್​ ಗೆಲ್ಲುವ ಕನಸು ನನಸಾಗಿರಲಿಲ್ಲ. 2003 ರಲ್ಲಿ ಸೌರವ್​ ಗಂಗೂಲಿ ನೇತೃತ್ವದಲ್ಲಿ ಕೊನೆಯ ಹಂತದಲ್ಲಿ ಎಡವಿ ವಿಶ್ವಕಪ್​ ಕನಸು ಭಗ್ನವಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಕೊನೆಗಳಿಗೆಯಲ್ಲಿ ಪಂದ್ಯವನ್ನ ಕೈ ಚೆಲ್ಲಿತ್ತು. ನಂತರ ಭಾರತದ ಪಾಲಿಗೆ ವಿಶ್ವಕಪ್ ಕನಸಾಗೇ ಉಳಿದಿತ್ತು. ವಿಶ್ವಕಪ್​ ಗೆಲ್ಲುವ ಕನಸನ್ನ ನನಸಾಗಿಸಿದ್ದು ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಅಂಡ್ ಟೀಂ. ಆ ಘಳಿಗೆ ಬಂದಿದ್ದು 2011ರ ಐಸಿಸಿ ವಿಶ್ವಕಪ್​ ವೇಳೆ.

2011ರ ವಿಶ್ವಕಪ್:

ಈ ಪಂದ್ಯಾವಳಿಯ ಸಾರಥ್ಯವನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ವಹಿಸಿದ್ದವು. 2011 ರಲ್ಲಿ ವಿಶ್ವಕಪ್​ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನಿಡುತ್ತ ಬಂದ ಭಾರತ ಕ್ರಿಕೆಟ್​ ತಂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾವನ್ನ ಮಣಿಸುವ ಮೂಲಕ 28 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ ಎತ್ತಿ ಹಿಡಿಯಿತು. ಆ ಮೂಲಕ ಕೋಟ್ಯಾಂತರ ಭಾರತೀಯ ಕ್ರಿಕೆಟ್​ ಪ್ರೇಮಿಗಳ ಕನಸನ್ನ ನನಸು ಮಾಡಿತು.

ಫೈನಲ್ ಪಂದ್ಯ:

ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ ತಂಡ 274 ರನ್​ಗಳ ಸಾಧಾರಣ ಗುರಿ ನೀಡಿತು. ನಂತರ ಬ್ಯಾಟಿಂಗ್​ ಮಾಡಿದ ಭಾರತ ತಂಡ 114 ರನ್ ಗಳಿಸುವಷ್ಟರಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಗೌತಮ್ ಗಂಭೀರ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ 109 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡದ ಗೆಲುವನ್ನು ಖಾತ್ರಪಡಿಸಿದರು. ಗಂಭೀರ್ ಶತಕವನ್ನು (97) ಮಿಸ್ ಮಾಡಿಕೊಂಡರೆ ಗೆಲುವಿನ ಸಿಕ್ಸರ್ ಸಿಡಿಸಿದ ಧೋನಿ 91 ರನ್ ಗಳಿಸಿ ಅಜೇಯರಾಗುಳಿದರು.

ಈ ಮೂಲಕ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತು. ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಯುವರಾಜ್​ ಸಿಂಗ್​ ಸರಣಿ ಶ್ರೇಷ್ಟ ಗೌರವಕ್ಕೆ ಭಾಜನರಾದರು.

ಮೇ 30ಕ್ಕೆ 2019ರ ವಿಶ್ವಕಪ್ ಆರಂಭ:

ಭಾರತ ಕ್ರಿಕೆಟ್​ ತಂಡ 2011 ರ ವಿಶ್ವಕಪ್​ ಎತ್ತಿ ಹಿಡಿದು ಇವತ್ತಿಗೆ 8 ವರ್ಷ ಕಳೆದಿವೆ. ನಂತರ 2015ರ ವಿಶ್ವಕಪ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್​​ನಲ್ಲಿ ಮುಗ್ಗರಿಸಿತು. ಈಗ ಮತ್ತೆ ವಿಶ್ವಕಪ್ ಬಂದಿದ್ದು ಮೇ 30ಕ್ಕೆ ಆರಂಭವಾಗಲಿದೆ. ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಆಡಲು ಇಂಗ್ಲೆಂಡ್​ಗೆ ತೆರಳುತ್ತಿದ್ದು, ಮತ್ತೊಮ್ಮೆ ವಿಶ್ವಕಪ್ ಗೆದ್ದು ಬರಲಿ ಎಂಬುದೆ ಅಭಿಮಾನಿಗಳ ಆಸೆಯಾಗಿದೆ.

Leave a Comment

Scroll to Top