ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ಭಾರತಕ್ಕೆ ಮರಳಿದ್ದು ಈ ವಿಚಾರವನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಖಚಿತ ಪಡಿಸಿದೆ.
ರೈನಾ ಅವರ ಸೋದರತ್ತೆ ಕುಟುಂಬ ಮೇಲೆ ದಾಳಿ ನಡೆದ ಬೆನ್ನಲ್ಲೆ ರೈನಾ ಅವರು ಭಾರತಕ್ಕೆ ವಾಪಸ್ಸ್ ಆಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಂಜಾಬ್‍ನ ಪಠಾಣ್‍ಕೋಟ್‍ನ ತರಿಯಾಲ್ ಗ್ರಾಮದಲ್ಲಿ ವಾಸವಿರುವ ರೈನಾ ಅವರ ಸೋದರತ್ತೆ ಕುಟುಂಬ ಮೇಲೆ ಅಪರಿಚಿತ ದಾಳಿಕೋರರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವರ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯ ಎಲ್ಲ ಸದಸ್ಯರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವಿಚಾರ ತಿಳಿದು ಈಗ ರೈನಾ ಅವರು ಭಾರತಕ್ಕೆವಾಪಸ್ ಮರಳಿದ್ದಾರೆ.
ಐಪಿಎಲ್ ಟೂರ್ನಿ ಆರಂಭಕ್ಕೆ 21 ದಿನ ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸರಣಿ ಆಘಾತ ಎದುರಾಗಿದೆ. ನಿನ್ನೆಯಷ್ಟೇ ತಂಡದ ಒಬ್ಬ ಬೌಲರ್ ಹಾಗೂ 10 ಮಂದಿ ಸಹಾಯಕ ಸಿಬ್ಬಂದಿ ಕೊರೋನಾ ಸೋಂಕು ಧೃಢಪಟ್ಟ ಕಾರಣ ತಂಡದ ಕ್ವಾರಂಟೈನ್ ಅವಧಿ ವಿಸ್ತರಣೆಯಾಗಿತ್ತು. ಈ ಮಧ್ಯೆ ಸುರೇಶ್ ರೈನಾ ಭಾರತಕ್ಕೆ ಮರಳಿದ್ದು ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.