ಫ್ರೆಂಚ್ ಗಯಾನಾ: ಭಾರತದ ಈ ವರ್ಷದ ಮೊಟ್ಟ ಮೊದಲ ಉಪಗ್ರಹವನ್ನು ಫ್ರಾನ್ಸ್‍ನ ಫ್ರೆಂಚ್ ಗಯಾನದಿಂದ ಇಂದು ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ನಿಗದಿ ಕಕ್ಷೆ ಸೇರುವಲ್ಲಿ ಸಫಲವಾಗಿದೆ. ಭಾರತದ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಫ್ರೆಂಚ್ ಗಯಾನಾದಲ್ಲಿರುವ ಕೌರೊಯುದಲ್ಲಿನ ಏರಿಯಾನ್ ಉಡಾವಣಾ ಕೇಂದ್ರದಿಂದ ನಿನ್ನೆ ತಡರಾತ್ರಿ 2.35 ರ ವೇಳೆಗೆ ಇಸ್ರೋ ಉಪಗ್ರಹವನ್ನು ಉಡಾಯಿಸಲಾಯ್ತು.
ಏರಿಯಾನ್ 5 ವಿಎ-251 ರಾಕೆಟ್, ಕೌರೂಯು ಉಡಾವಣಾ ಕೇಂದ್ರದಿಂದ 3,357 ಕೆ.ಜಿ. ತೂಕದ ಉಪಗ್ರಹವನ್ನು ಆಗಸಕ್ಕೆ ಹೊತ್ತೊಯ್ಯಿತು. 38 ನಿಮಿಷ 25 ಸೆಕಂಡ್ಗಳಲ್ಲಿ, ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಏರಿಯಾನ್, ಇಸ್ರೋದ ವರ್ಷದ ಮೊದಲ ಪ್ರಯತ್ನವನ್ನು ಯಶಸ್ವಿಗೊಳಿಸಿದೆ.
ವಿಶೇಷತೆ ಏನು?
3 ಡಿಗ್ರಿ ರೇಖಾಂಶದಲ್ಲಿ ಉಪಗ್ರಹ ನೆಲೆಗೊಳ್ಳಲಿದ್ದು ಉತ್ತಮ ಗುಣಮಟ್ಟದ ಟಿವಿ, ಟೆಲಿ ಕಮ್ಯೂನಿಕೇಶನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸೇವೆಗಳನ್ನು ನೀಡಲಿದೆ. ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‍ಲಿಂಕಿಂಗ್, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‍ಎನ್‍ಜಿ), ಸೆಲ್ಯೂರಲ್ ಬ್ಯಾಕ್‍ಹೌಲ್ ಕನೆಕ್ಟಿವಿಟಿ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು ಸೇರಿದಂತೆ ಅನೇಕ ಸೇವೆಗಳನ್ನು ಭಾರತ, ಗಲ್ಫ್ ದೇಶಗಳು, ಏಷ್ಯಾದ ಹಲವು ದೇಶಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಅನ್ನು ಪ್ರಾಥಮಿಕವಾಗಿ ದೂರಸಂಪರ್ಕ ಉದ್ದೇಶಕ್ಕಾಗಿ ಮತ್ತು ಮಾಹಿತಿ ಪ್ರಸರಣ ಸೇವೆಗಾಗಿ ಬಳಸಲಾಗುತ್ತದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ ‘ಇನ್‍ಸ್ಯಾಟ್-4ಎ’ ಉಪಗ್ರಹದ ಬದಲಿಗೆ ‘ಜಿಸ್ಯಾಟ್-30’ ಅನ್ನು ಉಡಾವಣೆ ಮಾಡಲಾಗಿದೆ.