ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್: ಆ್ಯಪಲ್, ಗೂಗಲ್‌ನಿಂದ ಆ್ಯಪ್ ಡಿಲೀಟ್..!

ನವದೆಹಲಿ: ಆ್ಯಪಲ್ ಮತ್ತು ಗೂಗಲ್ ತನ್ನ ಆ್ಯಪ್ ಸ್ಟೋರ್ ನಿಂದ ಟಿಕ್‌ಟಾಕ್ ಆ್ಯಪ್‌ ತೆಗೆದು ಹಾಕಿದೆ.

ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚನೆ ನೀಡಿತ್ತು.

ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

ಟಿಕ್‌ಟಾಕ್‌ನಿಂದ ಅಶ್ಲೀಲ ವಿಡಿಯೋಗಳು ಹೆಚ್ಚಾಗುತ್ತಿವೆ. ಅಲ್ಲದೇ ಚಿಕ್ಕ ಮಕ್ಕಳು ಕೂಡಾ ಈ ಆ್ಯಪ್​​​ ಬಳಕೆ ಮಾಡುತ್ತಿದ್ದು, ಇದು ಅವರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಲೈಂಗಿಕ ಆಕ್ರಮಣತೆ ಕೂಡಾ ಹೆಚ್ಚಾಗುತ್ತಿದೆ ಅಂತಾ ಮದ್ರಾಸ್ ಹೈಕೋರ್ಟ್ ಹೇಳಿತ್ತು.

ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.

ಸುಪ್ರೀಂ ಕೋರ್ಟ್ ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆ್ಯಪನ್ನು ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿದೆ.

ಕಂಪನಿ ಸ್ಪಷ್ಟನೆ: ವಿವಾದ ಸಂಬಂಧ ಸ್ಪಷ್ಟನೆ ನೀಡಿರುವ ಬೈಟ್‍ಡಾನ್ಸ್ ಟೆಕ್ನಾಲಜಿ, ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗುತ್ತಿರುವ ಜನರ ವಿಡಿಯೋಗಳಿಗೆ ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನ ಮೇಲೆ ನಂಬಿಕೆ ಗೌರವವಿದ್ದು ಇಲ್ಲಿಯವರೆಗೆ ಸುಮಾರು 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೇವೆ. ಈ ಸಂಬಂಧ ವಿಡಿಯೋಗಳ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ತಿಳಿಸಿದೆ.

Leave a Comment

Scroll to Top