6 ಗಂಟೆ ತಡವಾಗಿ ಆಗಮಿಸಿದ ರೈಲು: ನೀಟ್ ಪರೀಕ್ಷೆಯಿಂದ ವಂಚಿತರಾದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಬೆಂಗಳೂರು: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿ ಮುಂದೆ ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿಗಳು ಇಂದು ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆ ಎದುರಿಸಿದ್ದರು. ಆದರೆ ಹಂಪಿ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿಗೆ 6 ಗಂಟೆ ತಡವಾಗಿ ಆಗಮಿಸಿದ್ದರಿಂದ ಉತ್ತರ ಕರ್ನಾಟಕದಿಂದ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಹಂಪಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16591) ಏಳು ಗಂಟೆಗಾಗಲೇ ಬೆಂಗಳೂರು ತಲುಪಬೇಕಾಗಿದ್ದ ಗಾಡಿ ಸುಮಾರು 6 ಗಂಟೆ ತಡವಾಗಿ ಆಗಮಿಸಿದೆ. ಇದರಿಂದಾಗಿ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು ತಮ್ಮ “ನೀಟ್” ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಬೆಂಗಳೂರಿನ ಒಟ್ಟು 931 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಿತು. ಆದರೆ ನಿಯಮದ ಪ್ರಕಾರ ವಿದ್ಯಾರ್ಥಿಗಳನ್ನು ಸರಿಯಾಗಿ 12.30ಕ್ಕೆ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟುಕೊಳ್ಳಲಾಯಿತು. ವಿದ್ಯಾರ್ಥಿಗಳು ಹಾಲ್ ಟಿಕೆಟ್ ಅಲ್ಲದೇ ಆಧಾರ್, ವೋಟರ್ ಮತ್ತು ಪಾನ್ ಕಾರ್ಡ್ ಗಳು, ಡ್ರೈವಿಂಗ್ ಲೈಸೆನ್ಸ್ ಗಳನ್ನು ತೋರಿಸಿ ಕೇಂದ್ರದೊಳಗೆ ಹೋಗಬೇಕಿತ್ತು. 1.30 ನಂತರ ಯಾವ ವಿಧ್ಯಾರ್ಥಿಗೂ ಪ್ರವೇಶವಿರುವುದಿಲ್ಲ ಎಂಬ ನಿಯಮ ಇದ್ದ ಪರಿಣಾಮ ಕೆಲ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೀಡಾದರು.

ಇತ್ತ ಪರೀಕ್ಷೆ ಬರೆಯಲು ವಂಚಿತರಾದ ವಿದ್ಯಾರ್ಥಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಅವರು, ಹಂಪಿ ಎಕ್ಸ್ ಪ್ರೆಸ್ ರೈಲು ತಡವಾಗಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಕಾನೂನು ಪ್ರಕಾರ ವಿದ್ಯಾರ್ಥಿಗಳು ಪರೀಕ್ಷೆ ಬರೆಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಪರೀಕ್ಷೆ ಬರೆಯಲು ಅವಕಾಶ ಲಭಿಸದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಸಹ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

Scroll to Top