ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಸಂಪರ್ಕ ಯೋಜನೆ ನೀತಿ ಯಡಿಯಲ್ಲಿ ಎರಡನೇ ವಿಮಾನ ಸೇವೆ ಇಂದಿನಿಂದ ಆರಂಭವಾಗಿದೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈ ಸೇವೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ 11:15ಕ್ಕೆ ಹಸಿರು ನಿಶಾನೆ ತೋರಿದರು.
ಈ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಇಂದಿನಿಂದ ಪ್ರತಿನಿತ್ಯ ವಿಮಾನ ಹಾರಾಟ ಆರಂಭವಾಯಿತು. ಸಂಸದ ಪ್ರತಾಪ್ ಸಿಂಹ, ಸಚಿವ ಸಾ.ರಾ.ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.
ವಿಮಾನ ಪ್ರತಿನಿತ್ಯ ಮಧ್ಯಾಹ್ನ 12 ಗಂಟೆಗೆ ಮೈಸೂರಿನಿಂದ ಹೊರಟು ಬೆಂಗಳೂರಿಗೆ 12:55ಕ್ಕೆ ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 10:30ಕ್ಕೆ ಹಾರಾಟ ಆರಂಭಿಸಿ 11:35ಕ್ಕೆ ಮೈಸೂರಿಗೆ ತಲುಪಲಿದೆ. ಪ್ರಯಾಣದರ ಸದ್ಯಕ್ಕೆ 1,500 ರೂ ನಿಗದಿಪಡಿಸಲಾಗಿದೆ. ವಾರದಲ್ಲಿ ಐದು ದಿನ ಮಾತ್ರ ಈ ವಿಮಾನದ ಸೇವೆ ಇರಲಿದೆ.
ಇದು ಮೈಸೂರಿನಿಂದ ಕಾರ್ಯ ಆರಂಭಿಸುತ್ತಿರುವ ಎರಡನೇ ವಿಮಾನವಾಗಿದೆ. ಈವರೆಗೆ ರಾತ್ರಿ 8:30ಕ್ಕೆ ಚೆನ್ನೈಗೆ ಮಾತ್ರ ಸೇವೆ ಇತ್ತು.
‘ಉಡಾನ್-3’ ಯೋಜನೆಯಡಿ ಮೈಸೂರಿನಿಂದ ಪ್ರಮುಖ ನಗರಗಳಿಗೆ ಅಗ್ಗದ ವಿಮಾನಯಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಮೈಸೂರು–ಚೆನ್ನೈ ಮಾರ್ಗದಲ್ಲಿ ಈಗಾಗಲೇ ಟ್ರೂಜೆಟ್ ಸಂಸ್ಥೆಯ ವಿಮಾನ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಿಂದ ಕೊಚ್ಚಿ, ಬೆಳಗಾವಿ, ಗೋವಾ ಮತ್ತು ಹೈದರಾಬಾದ್‌ಗೆ ವಿಮಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.