ರೆಪೋ ದರ ಕಡಿತಗೊಳಿಸಿದ ಆರ್​ಬಿಐ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ

ನವದೆಹಲಿ: ಆರ್​ಬಿಐ(ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ.

ಇದರಿಂದ ರೆಪೋ ದರ ಈ ಮೊದಲಿದ್ದ ಶೇ.6.00 ರಿಂದ ಶೇ. 5.75 ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ರೆಪೋ ದರಇಳಿಕೆಯಿಂದ ಆರ್ಥಿಕ ಹೆಚ್ಚಿನ ವೇಗ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ನಿರ್ಧಾರದ ಜೊತೆಗೆ ಜಿಡಿಪಿ ಬೆಳವಣಿಗೆಯ ದರವನ್ನು ಕಡಿತಗೊಳಿಸಲಾಗಿದೆ. ಈ ಹಿಂದೆ 2019-20ರಲ್ಲಿ ಶೇ.7.2 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಆದರೆ ಈಗ ಈ ದರವನ್ನು ಶೇ.7ಕ್ಕೆ ತಗ್ಗಿಸಲಾಗಿದೆ. ರಿವರ್ಸ್ ರೆಪೋ ದರದಲ್ಲಿ .25 ರಷ್ಟು ಕಡಿತಗೊಳಿಸಲಾಗಿದೆ. ಹೀಗಾಗಿ ಈಗ ಶೇ.5.75 ರಿಂದ ಶೇ.5.50ಕ್ಕೆ ಇಳಿಸಲಾಗಿದೆ.

ಎಂಪಿಸಿ ಸಭೆಯು ಕಳೆದ ಏಪ್ರಿಲ್‍ನಲ್ಲಿ ನಡೆದಿತ್ತು. ಆಗ ರೆಪೋ ದರವನ್ನು 25 ಅಂಶಗಳಷ್ಟು ಇಳಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ 25 ಬೇಸಿಕ್ ಪಾಯಿಂಟ್‍ನಷ್ಟು ರೆಪೋ ದರಇಳಿಕೆ ಮಾಡಲಾಗಿತ್ತು.

Scroll to Top